ಶಂಕಿತರು-ಸೊಂಕಿತರು
ನಾಗರಾಜ ಮಸೂತಿ..
ಹೆಜ್ಜೆ ಗುರುತುಗಳು ಮಾಯವಾಗಿ
ಕಂಗಾಲದ ರಸ್ತೆಗಳು,
ಮೇಲ್ಮುಖವಾಗಿ ಮುಗಿಲನ್ನೆ ದಿಟ್ಟಿಸುವ ಗಿಡಮರಗಳು,
ಗಿಜಗೂಡುವ ಸರಕಾರಿ ಕಛೇರಿಗಳ
ಖಾಲಿ ಮನಸ್ಥಿತಿಯ ಗೋಡೆಗಳು,
ಬೆಳಕು ಕಾಣದೆ ಕತ್ತಲಾವರಿಸಿದ ದವಾಖಾನ ಕೋಣಿಗಳು,
ಫಿನಾಯಿಲ್ ವಾಸನೆ ಆವರಿಸಿಕೊಂಡು ತಳತಳ ಅನ್ನುತ್ತಿವೆ ಅಮವಾಸ್ಯೆ ಪೂಜೆಗೆ ಸಿದ್ಧವಾದಂತೆ,
ಓಣಿಯ ಬೀದಿಗಳೆಲ್ಲ ಲೊಚುಗುಟ್ಟುತ್ತಿವೆ ಸಿಂಗಾರಗೊಂಡು,
ಗಟಾರಗಳೆಲ್ಲ ಕಂದಮ್ಮಗಳಂತೆ ಪೌಡರ್ ಬಳಿದುಕೊಂಡು
ವಧು ವರರ ವೇದಿಕೆಗೆ ಸಿದ್ಧವಾದಂತಿವೆ
ಸಂಜೆ ಹೊತ್ತಿಗೆ ಕತ್ತಲೆ ಮೆತ್ತಿಕೊಂಡ ಆವರಣಕ್ಕೆಲ್ಲ ಬೀದಿ ದೀಪಗಳು ಬೆಳಕು ಹರಿಸಿ,
ಕಛೇರಿ ಕಟ್ಟಡಗಳು, ಲೈಟ್ ಕಂಬಗಳು, ಗಿಡಮರಗಳು, ಗಟಾರಗಳು ಒಟ್ಟಾಗಿ ಒಂದೇ ಪ್ರಶ್ನೆ ಎತ್ತಿವೆ,
ಕಿಟಕಿಯಿಂದ ಇಣುಕುವ ಮನುಷ್ಯನನ್ನು,
ಇದಕ್ಕೆಲ್ಲ ಕಾರಣೀಭೂತರಾರು ?
*******