ಇಂದಿರಾ ಮೋಟೆಬೆನ್ನೂರ-ಅವಳು ಕವಿತೆ ಮತ್ತು ಮೌನ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ-

ಅವಳು ಕವಿತೆ ಮತ್ತು ಮೌನ

ಅವಳು ಮೌನವನ್ನೇ ಮಾತಾಡಿಸುವ ಜಾಣೆ
ಗುಬ್ಬಿ ಗೂಡಿನ ಚಿಕ್ಕ ಹಕ್ಕಿಗಳಿಗೂ
ನಗೆಯ ಗಿಲಗಂಚಿ ಹಿಡಿದವಳು..
ಅರೆ ಬಿರಿದ ಮೊಗ್ಗುಗಳ ಮೊಗಕೆ
ಪ್ರೀತಿ ಗುಲಾಲ ಬಳಿದವಳು..

ಕಮಲದ ಕದಪಿಗೆ ಕೆಂಪು ಮುದ್ದಿಸಿದವಳು
ಗುಲಗಂಜಿ ಕೆನ್ನೆಗೆ ಕಪ್ಪು ಚುಕ್ಕೆ
ಇಟ್ಟು ದೃಷ್ಟಿ ತೆಗೆದವಳು…
ಗಲ್ಲಿ ಗಲ್ಲಿಯ ಗಲ್ಲ ಸವರುತ
ಸಾಗಿದ ಚಂದಿರನೆದೆಗೇ ಕನ್ನ ಹಾಕಿದವಳು

ಓಡುವ ಪುಟ್ಟ ಅಳಿಲು ಮರಿಗೆ
ನುಡಿ ಮುಟ್ಟಿಸಿದವಳು
ಗಿಡ ಮರಗಳನ್ನು ಅಲುಗಾಡಿಸಿ
ವೀಣೆ ಝೇಂಕಾರ ಮೀಟಿದವಳು
ಬೆಳ್ಳಗಿರುವದೆಲ್ಲ ಹಾಲೆಂದು
ನಂಬುವ ಮುಗ್ಧ ಮನದ
ಮಳ್ಳ ಹುಡುಗಿ ಮಬ್ಬ ಹುಡುಗಿ…

ಗೊತ್ತಿಲ್ಲ ಅದಾರ ಕಣ್ಣು ತಗುಲಿತೋ
ಒಮ್ಮೆಲೇ ಮೌನದ ಕಣಿವೆಯ ಮೂಕ
ಯಾತ್ರಿಕಳು ಅವಳೀಗ
ಅದಾರು ನೋವ ಕೊಟ್ಟರೋ..
ಅದಾವ ನೋವು ಬರೆ ಇಟ್ಟಿತೋ
ಹೃದಯಕೆ ಎಲ್ಲ ನಿಶಬ್ದ..ಸ್ತಬ್ಧ..

ಶಶಿಯಿರದ ಅಂಗಳದಿ ಖುಷಿಯ
ಬೆಳದಿಂಗಳರಸುವ ಹುಚ್ಚು ಹಂಬಲ
ಪುಟ್ಟ ಹೃದಯಕೆ…
ಪರಿ ಪರಿಯಾಗಿ ಬೇಡಿದರೂ
ಅವಳದಲ್ಲದ ತಪ್ಪಿಗೆ..ಇಲ್ಲದೆ ರಕ್ಷೆ ..
ಕಿರಿಕಿರಿ ಹುಡುಗಿಗೆ ಜೀವಾವಧಿ ಶಿಕ್ಷೆ…

ಕವಿತೆ ಎಂದರೆ ಜೀವ ಯಾವತ್ತು…
ಎಷ್ಟು ಪ್ರೀತಿ..ಜೀವಕ್ಕಿಂತ ಹೆಚ್ಚು
ಯಾರು ಅವಳ ಮೃದು ಹೃದಯಕೆ
ಕೊಡಲಿ ಏಟು ನೀಡಿದರೋ…
ಮಾತು ಮೌನದ ಚಿಪ್ಪಿನಲ್ಲಿ ಅಡಗಿದ ಮುತ್ತು…
ಕವಿತೆ ಮತ್ತು ಅವಳ ಪುಟ್ಟ ಪ್ರಪಂಚ…
ಕತ್ತಲಲಿ ಮುಳುಗಿದ ಹೊತ್ತು….

ಹಕ್ಕಿ ಹಾಡಿಲ್ಲ..ಹೂವ ನಗುವಿಲ್ಲ
ಮಂಜು ಹನಿ ಜಾರುಬಂಡೆಯಿಲ್ಲ
ಬರೀ ಕಣ್ಣ ಕಂಬನಿ ಧಾರೆ..
ಅವಳೀಗ ಮೌನಿ…
ಗಾಯಗೊಂಡ ಎದೆ ಬೆಂಕಿಯ
ಹೊತ್ತು ತಿರುಗುತ್ತಿರುವ
ನೋವಿನ ನೀರೆ…

ಬೆಳದಿಂಗಳ ಕಂಗಳ ಹೂ ಮನದ
ಹುಡುಗಿ ನಗೆ ಇಲ್ಲದ ಮಲ್ಲಿಗೆ..
ಪದವಿಲ್ಲದ ಎದೆಗವನ..
ಮುದವಿಲ್ಲದ ಸಿರಿ ಮಲ್ಲಿಗೆ
ನಗೆಯಿಲ್ಲದ ನಿರ್ಜೀವ
ಬೇಲಿ ಮೇಲಿನ ನೀಲಿ ಹೂ..

ಪ್ರೀತಿಯನು ಹಂಚುತ್ತಾ ಸಾಗಿದವಳು
ಪ್ರೀತಿಗೆ ಪ್ರತಿ ಪ್ರೀತಿಯಲ್ಲದೇ
ಬೇರೇನೂ ಬಯಸದವಳು…
ಎಲ್ಲೆಡೆ ಪ್ರೀತಿ ಹಂಚುವ ಅವಳೆದೆಯಲಿ
ಬಡಿಸಿದ್ದು ದ್ವೇಷ..ನಿರಾಕರಣೆ..ರೋಷ
ಸಕಾರಣವಿಲ್ಲದ ಪರಿತ್ಯಕ್ತೆ…

ಕೊಳ್ಳಿ ಇಟ್ಟ ಹೃದಯಕ್ಕೂ
ಒಳಿತನ್ನೇ ಹಾರೈಸುವ….
ಸುಳ್ಳು ಅಪವಾದ ಹೊತ್ತು
ಶಿಕ್ಷೆ ಅನುಭವಿಸುತಿರುವ
ನಿರಪರಾಧಿಗಳು..ಮೌನವಾಗಿ
ಅವಳು ಮತ್ತು ಅವಳ ಕವಿತೆ….


ಇಂದಿರಾ ಮೋಟೆಬೆನ್ನೂರ

One thought on “ಇಂದಿರಾ ಮೋಟೆಬೆನ್ನೂರ-ಅವಳು ಕವಿತೆ ಮತ್ತು ಮೌನ

  1. ಮೌನ ಹೊತ್ತು ನಗೆಯ ಗಿಲಾಗಂಜಿ ಹಿಡಿದವಳು ಮೌನವಾಗಿಯೇ ಸ್ವೀಕರಿಸಿದ ಬಗೆ… ತುಂಬಾ ಚನ್ನಾಗಿದೆ ಗೆಳತಿ
    ಅನಿತಾ ಮಾಲಗತ್ತಿ

Leave a Reply

Back To Top