ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ನೀನೀರಬೇಕಿತ್ತು ತಾತಾ…!
ನಿನ್ನ ಆಸೆಗಳಿಗೆ ಮಣ್ಣೇರಚಿ
ಬೀದಿಗೊಂದು,ಓಣಿಗೊಂದು
ಚೌಕಿಗೊಂದು ನಿನ್ನ ಹೆಸರಿಟ್ಟಿದ್ದಾರೆ
ಆದರ್ಶಗಳನ್ನು ಮಾತ್ರ ಗಾಳಿಗೆ
ತೂರಿದ್ದಾರೆ ನೋಡಲು
ನೀನಿರಬೇಕಿತ್ತು ತಾತಾ…
ಒಂಟಿ ಹೆಣ್ಣಿಗೆ ಮಾನರಕ್ಷಣೆಯಿಲ್ಲ
ನೀನು ಕಂಡ ಕನಸುಗಳಿಗೆ ನೀರೆರೆದು
ಪೋಷಿಸುವರಿಲ್ಲ, ಬರಿ ಲಂಚ
ಕೊಲೆ ಸುಲಿಗೆಗಳ ಲೋಕವ ಸೃಷ್ಟಿಸಿ
ನಗುತ್ತಿದ್ದಾರೆ, ಇದನ್ನೆಲ್ಲ ನೋಡಲು
ನೀನಿರಬೇಕಿತ್ತು ತಾತಾ…
ವರ್ಷಕ್ಕೊಂದು ನಿನ್ನ ಜಯಂತಿ
ರಘುಪತಿ ರಾಘವ ರಾಜಾರಾಮ್ ಹಾಡು
ಆರಡಿ ನಿನ್ನ ನಗುಮೊಗದ ಕಟೌಟ್,
ಕೆಳಗೆ ಪುಢಾರಿಗಳ ನೃತ್ಯ
ಕಣ್ತೆರೆದು ಒಮ್ಮೆಯಾದರೂ
ಇದನ್ನೆಲ್ಲ ನೋಡಲು
ನೀನೀರಬೇಕಿತ್ತು ತಾತಾ…!
ಕಛೇರಿಯಲ್ಲೊಂದು ಮೊಳೆಗೆ
ನಿನ್ನ ಪೋಟೋ ನೇತುಹಾಕಿ
ಕೆಳಗಡೆ ಸರ್ಕಾರದ ಕೆಲಸ ದೇವರ ಕೆಲಸ
ಎಂಬ ರಾರಾಜಿಸುವ ಮಂತ್ರ
ಹೆಸರಿಗೆ ಮಾತ್ರ ಗಾಂಧಿನಾಡು
ಬಡವರ ತುಳಿದು ಶ್ರೀಮಂತರಿಗೆ
ಸಲಾಮ್ ಹೊಡೆಯುವ
ನಯವಂಚಕರ ನೋಡಲು
ನೀನಿರಬೇಕಿತ್ತು ತಾತಾ…
ಈಗ ನೀನೇನಾದರೂ ಬದುಕಿದ್ದು
ಪಿಂಚಣಿಗೋ, ಮಾಶಾಸನಕ್ಕೋ
ಅರ್ಜಿ ಸಲ್ಲಿಸಿದ್ದರೆ ಎಲ್ಲರಂತೆ ನಿನಗೂ
ಕಿರುಕುಳ ಕೊಟ್ಟು ಹಣ ವಸೂಲಿ ಮಾಡುತ್ತಿದ್ದರು
ಇದನ್ನೆಲ್ಲ ನೋಡಲು
ನೀನಿರಬೇಕಿತ್ತು ತಾತಾ….
ನೀ ಹೋದದ್ದೆ ಸರಿಯಾಯಿತು
ಆಕಸ್ಮಾತ್ ಬದುಕಿದ್ದರೆ ಎದೆಯೊಡೆದು
ಪ್ರಾಣ ಬಿಡುತ್ತಿದ್ದಿಯೋ…
ಅಯ್ಯೋ ರಾಮ…ರಾಮ…
ಜನರ ಅಂತರಂಗವ ಅರಿಯಲು
ನೀನಿರಬೇಕಿತ್ತು ತಾತಾ….
ಶಂಕರಾನಂದ ಹೆಬ್ಬಾಳ
ವಾಸ್ತವದ ಚಿತ್ರಣ ಯಥಾವತ್ತಾಗಿ ಮೂಡಿಬಂದಿದೆ. ಅಭಿನಂದನೆಗಳು.