ಕಾವ್ಯ ಸಂಗಾತಿ
ಹಂಸಪ್ರಿಯ
ಉಪ್ಪಮ ಉಪ್ಪೋ?.
ಮುಳ್ಳು – ಕಳ್ಳಿ ಸಾಲಗ
ಹಾರಾಡೋ ಚಿಟ್ಟೆ ಹಿಡಿದು
ಹಸಿರುಹುಲ್ಲಗರಿಗೆ ಕಳ್ಳಿಹಾಲಮೆತ್ತಿ
ಚಿಟ್ಟೆಬಾಲಕೆ ಹಚ್ಚಿ
ಆಟವಾಡಿದ ದಿನ ಮತ್ತೆ ಬರುವುದೇ ಗೆಳೆಯಾ?
ಹಸಿರು – ಕೆಂಪುಸೀರೆ
ತೊಟ್ಟ ಜಾಲಿಗಿಡದ ಸೊಪ್ಪು ತಿಂದ
ಗುಯ್ ಗುಡುವ ಜೀರಂಗಿ ಹಿಡಿದು
ಕೊರಳಿಗೆ ದಾರದಿ ನೇಣು ಬಿಗಿದು ಹಾರಿಸಿ
ಹಾಡಿ – ನಲಿದು ಬೆಂಕಿ ಪೊಟ್ಟಣದಿ ಕಾಪಿಟ್ಟ ದಿನ
ಎಲ್ಲಿ ಹೋದವು ಗೆಳೆಯಾ?
ಹುಡುಗ – ಹುಡಿಗಿಯರು ಜೊತೆಗೂಡಿ
ನೆಲದಿ ಚೌಕಮನೆ ಬರೆದು
ಮನೆಯಿಂದ, ಮನೆಗೆ
ಬೋಕಿ ಬಿಲ್ಲೆಯ ಕಾಲಲಿ ಚಿಮ್ಮಿ ಆಟವಾಡಿದ ದಿನ
ಮರಳಿ ಬರುವವೇ ಗೆಳೆಯಾ?
ಗೊಟ್ಟ – ಗೋಲಿಆಟ
ಪತ್ತಗುಳಿಆಟ, ಚಿನ್ನಿಕೋಲು
ಮರಕೋತಿ, ಕಳ್ಳ – ಪೋಲಿಸಾಟ
ನೆನಪಿನ ಬುಟ್ಟಿಯಲುಂಟು, ಮತ್ತೆ
ಮರು ಹುಟ್ಟು ಪಡೆಯಬೇಕು ಗೆಳೆಯಾ!
ಮದುವೆ ಸಂಭ್ರಮದಿ
ಹಾಕಿದ ಹಂದರದ ಗೂಟಗಳ ಸುತ್ತಿ,
ಉಪ್ಪಮ ಉಪ್ಪೋ
ಆ ಮನಿಗೋಗು…..
ಆಟವಾಡಿ ನಲಿದಾಡಿದ ದಿನಗಳ
ನಮ್ಮ ಮೊಬೈಲ್ ಸಂತತಿಗೂ ತಿಳಿಸಬೇಕು ಗೆಳೆಯಾ.
————–
ಹಂಸಪ್ರಿಯ