ಕಾವ್ಯ ಸಂಗಾತಿ
ಪ್ರಮೋದ ಜೋಶಿ ಕವಿತೆ
ಆಸೆ
ಹುಟ್ಟಾಕಿದ ಆಸೆ ಬೆಳೆದುನಿಂತಿದೆ
ಪಾಲನೆಗೆ ಅದೆಷ್ಟೋ ಸಮಯ ಸತ್ತಿವೆ
ಆಚರಿಸುದಾವುದೊ ತಿಳಿಯುತ್ತಿಲ್ಲಾ
ಜನುಮ ದಿನವೊ ಸಮಯದ ತಿಥಿಯೊ
ಸುಟ್ಟು ಶಿವನಾಗಲಿಲ್ಲಾ ಬಿಟ್ಟು ಬುಧ್ದನಲ್ಲ
ಸಾವಿನ ಶಿಲುಬೆ ಹೊತ್ತು ನಿಂತೆ
ವಿಕ್ರಮನಾಗಿರುವೆ ಬೇತಾಳ ಹೊತ್ತು
ನಾನು ನಾನಾಗದೆ ನನ್ನತನವನೇ ಬಿಟ್ಟು
ಬೇಡದೆ ಬೇಡಿಸುತಿಹುದು ನಿತ್ಯ
ಉರಿಯದೆ ದಹಿಸುತಿರುವುದೂ ಸತ್ಯ
ಕೊರೆಯುತಿಹುದು ಒಳಒಳಗೆ
ಆಡಲು ಮಾತು ಬಾರದೆ
ನಿತ್ಯದ ಬದುಕಿಗೆ ಹಾಕಿದ ಬೇಲಿ
ದಾಟಿ ದಾಟಿಯೇ ನಡೆಯಬೇಕು
ಹಾದಿಗುಂಟ ಜೊತೆ ನಮ್ಮದೆ ನೆರಳು
ಮರ್ಮ ಅರಿಯದಿದ್ದರೂ ಕರ್ಮ ಬಿಟ್ಟಿತೆ
ಸಂಧಾನಕ್ಕಿಲ್ಲಾ ಇಲ್ಲೊಬ್ಬ ಕೃಷ್ಣ
ಯುದ್ಧವಂತೂ ಶತಸಿದ್ಧ
ನಮ್ಮೊಳ ಕೌರವರ ವಧೆಗೆ
ಪಾಂಡವರು ಎಚ್ಚರಾಗಬೇಕಿದೆ
ಆಸೆ ಬೆಳದಂತೆಲ್ಲಾ ಕತ್ತಲು ನಮಗೆ
ಅರಿವಿಗೆ ಸೂರ್ಯ ಗ್ರಹಣ
ಮೊಳಕಿನಲ್ಲೇ ಹಿಸುಕಿ ಬದುಕಲು
ಇಲ್ಲಾ ಮತ್ತೊಬ್ಬ ನಮ್ಮಂತ ಜಾಣ
ಪ್ರಮೋದ ಜೋಶಿ
ಆಸೆಯ ಆಚಿನ ಬದುಕು ತುಂಬಾ ಸುಂದರ ಸರ್