ಕಾವ್ಯ ಯಾನ
ನಾಗರಾಜ ಬಿ.ನಾಯ್ಕ.
ಸದ್ದಿಲ್ಲದೇ………
ಸಣ್ಣ ಬೀಜಗಳು
ಸದ್ದಿಲ್ಲದೇ ಹರಡಿವೆ
ತಂತು ತಂತುಗಳಲ್ಲಿ
ಚಿಗುರು ಒಡೆದು.
ಹಳ್ಳಿ ನಗರದ ಸೀಮೆ ದಾಟಿ
ಓರೆ ಕೋರೆಗಳ ಎಲ್ಲೆ ಮೀರಿ
ಕಿವಿಯಲ್ಲಿ ಬಾಯಲ್ಲಿ ತೇಲಿ
ಕಾಣದೇ ಕುಳಿತಿವೆ ಮನದಿ.
ಆ ಕ್ಷಣಕ್ಕೆ ಅಷ್ಟೇ ಜೀವವಾಗಿ
ಪದವಾಗಿ ರೂಪವಾಗಿ
ಪ್ರತಿರೂಪವಾದರೆ ಸಾಕು
ಮತ್ತೊಂದು ಹೊಸ ಸಾಧ್ಯತೆ.
ಸುತ್ತು ಸುತ್ತುವ ಪಯಣ
ಚಿತ್ತ ಸುತ್ತುವ ವದನ
ಎಣೆಯಿರದ ತಲ್ಲಣ
ಗರಿಗೆದರಿದ ಸಂಭ್ರಮ.
ಮತ್ತೆ ಮುತ್ತಾಗುವ ಮಳೆಹನಿ
ಎಳೆಮೀನ ಸೂಜಿ ಕಣ್ಣು
ಶೋಧಿಸಿದ ಜೇನು ಹನಿ
ಮೆತ್ತನೆಯ ಮಣ್ಣಲ್ಲಿ ಕುಳಿತಿಬ್ಬನಿ.
ಸಂಜಾತ ಒಲವು
ಪ್ರೀತಿಯೊಳಗೆ ನೆಲವು
ದಿಕ್ಕು ದಿಕ್ಕಿಗೂ ಜಗವು
ನೆಮ್ಮದಿಗೆ ಉಸಿರಿನ ಕಾವ್ಯವು.
ನಾಗರಾಜ ಬಿ.ನಾಯ್ಕ.
ಈ ಕವಿ ಹೆಮ್ಮರವಾಗುವ ಎಲ್ಲಾ ವೈಶಿಷ್ಟ್ಯತೆ ಈ ಕವನದ ಭೀಜದಲ್ಲಡಗಿವೆ.
ಕವಿತೆ ಚೆನ್ನಾಗಿದೆ.. ಬರೆಯುತ್ತಿರಿ..
ಕವಿತೆಯ ರಚನೆ ಬಹಳ ಸೊಗಸಾಗಿದೆ. ನೀವು ಅಂದು ಪದವಿ ಕಲಿಯುತ್ತಿರುವಾಗಲೂ ರಚಿಸಿದ ಕವನಗಳು ಈಗಲೂ ನೆನಪಾಗುತ್ತಿವೆ. ನಿಮ್ಮ ಈ ಕಾವ್ಯಯಾನ ಹಾಗೆಯೇ ಮುಂದುವರೆದು ಅನೇಕರಿಗೆ ದಾರಿದೀಪವಾಗಲಿ. ಮಾತಿಗಿಂತಲೂ ಹೆಚ್ಚಾಗಿ ಮೌನದಿಂದಲೇ ಪ್ರತಿಕ್ರಿಯಿಸುವ ತಾವು ಮುಂದಿನ ಭವಿಷ್ಯದಲ್ಲಿ ಒಬ್ಬ ಉತ್ತಮ ಕವಿಯಾಗಿ ಅನೇಕರಿಗೆ ಸ್ಪೂರ್ತಿಯಾಗಲಿ..