ಕಾವ್ಯ ಸಂಗಾತಿ
ಮೀನಾಕ್ಷಿ ಸೂಡಿ(ಭಾಂಗಿ)-
ಭಾವನೆಗಳು ಬೆತ್ತಲಾದಾಗ
ಸ್ಪಂದನೆಯ ಬಿರು ಬರಗಾಲಲ್ಲಿ
ಭಾವನೆಗಳ ಪಾತರಗಿತ್ತಿ ಹಾರಾಟ
ತುಂಡಾದ ದಂಡಿನ ರವದಿಯಂತೆ
ಪ್ರೀತಿ ಪ್ರೇಮಗಳ ಮಿಲನಕ್ಕೂ
ಮಿಥ್ಯದ ನೆರಳು… ಸತ್ಯ ನಾಚುವಂತೆ
ಕಾಮಕ್ರೋಧಗಳ ಕೆನ್ನಾಲಿಗೆ ಹರಿದಾಟ
ನನ್ನೆದೆಯ ಗೂಡಿನಲ್ಲಿ
ಸಂಬಂಧಗಳ ಸುಟ್ಟು..
ಸ್ನೇಹ ಮಮತೆ ಪ್ರಾಮಾಣಿಕತೆಯ ಸಮಾಧಿಗಳು ತಮ್ಮ
ಇರುವಿಕೆಯನ್ನು ಸಾರುತಿವೆ
ಭಾವುಕತೆ ಬೌದ್ಧಿಕತೆಯ
ಯಕ್ಷ ಪ್ರಶ್ನೆಯಲ್ಲಿಯೇ ಈ ಲೋಕ ಬೆತ್ತಲಾಗುತ್ತಿದೆ
ಭಾವ-ಭಾವನೆಗಳ
ಗಡಿ ರೇಖೆಗಳ ದಾಟಿ
ಮನುಷ್ಯತ್ವದ ಕದ ತಟ್ಟಿದಾಗ
ಭಾವನೆಗಳ ಸ್ಪಂದನೆಗೆ
ಮೂಕವಾದ ಲೋಕ
ಭಾವನೆಗಳಿಗೆ ಬೆಲೆ ಇಲ್ಲ
ನಿಂತ ನೀರಾಗುತ್ತಿವೆ
ದುಡ್ಡಿನ ದರ್ಪದಲ್ಲಿ …
ಭಾವನೆಗಳು ಬೆತ್ತಲಾದಾಗ
ಮಾನವೀಯತೆಯ
ಕಪ್ಪು ಮನಸ್ಸಿನ ಅನಾವರಣ ..
ಹಗಲು ರಾತ್ರಿ ಎಂಬ
ಹಕ್ಕಿ ರೆಕ್ಕೆಗಳ ಮೇಲೆ
ಭಾವನೆಗಳು ಕೈಬೀಸಿ
ವಿದಾಯ ಹೇಳುತ್ತಿವೆ.
ಮೀನಾಕ್ಷಿ ಸೂಡಿ(ಭಾಂಗಿ)
ವಾಸ್ತವ.