ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ
ಮುಗ್ಧ ಮನಸಿನ ಹುಡುಗ
ಮುಗ್ಧ ಮನಸ್ಸಿನ ಮೇಲೆ
ಪ್ರೇಮದ ಹಚ್ಚಡ ಹೊದಿಸಿ
ನಡುಗುವ ಚಳಿಗೆ ಬೆಚ್ಚಗಾದವನು
ಒಲ್ಲೆನೆಂದರೂ ಒಲವತೋರಿ
ಬೆಲ್ಲದ ನುಡಿ ಮಾತಾಡಿ
ಮೆಲ್ಲಗೆ ಮನವ ಕದ್ದು
ನಿಲ್ಲದೆ ಹೊರಟು ಹೋದವನು
ಬಿಸಿಲು ಕುದುರೆಯ ಬೆನ್ನಟ್ಟಿಸಿ
ಸುಣ್ಣದ ನೀರ ತೋರಿ
ಹಾಲೆಂದು ಭ್ರಮೆಯ ಹುಟ್ಟಿಸಿ
ಹಾಲಾಹಲವೆಬ್ಬಿಸಿದೆ
ಎದೆಯ ಪಿಸುದನಿಯಲ್ಲಿ
ಹಾಲು ಮನಸ್ಸಿನ ಹುಡುಗ
ಪ್ರೇಮವೆಂದರೇನು ಬಲ್ಲೆಯಾ
ಹಚ್ಚ ಹಸಿರಿನ ನಿಚ್ಚ ಮನಸ್ಸಿನ
ಪಚ್ಚೆ ಪೈರು ಈ ಸುಂದರ ಪ್ರೇಮ
ಗುಡುಗು ಸಿಡಿಲಿನ ಆರ್ಭಟ
ಹನಿಸಲಿಲ್ಲ ಎದೆಯ ಬೇಗುದಿಗೆ
ಸುಂಟರಗಾಳಿಯಾಗಿ ಸುತ್ತಿ ಸುತ್ತಿ
ಬಿರುಗಾಳಿಯಂತೆ ಬಿರ್ರನೆ ಹೋದೆ
ತಂಪಾಗಲಿಲ್ಲ ಸುಳಿಗಾಳಿಯಾಗಿ ಸುಳಿದು ಮನಕೆ
——–
ಡಾ. ಮೀನಾಕ್ಷಿ ಪಾಟೀಲ