ಕಾವ್ಯ ಸಂಗಾತಿ
ವಿದ್ಯಾಶ್ರೀ ಅಡೂರ್-
ಹೆಗಲಿಗೊಂದು ಹೊಣೆ
ಕಾಡು ಮಲ್ಲಿಗೆಗಿಂದು ನಾಡು ನೋಡುವ ತವಕ
ಹಾಡಾಗುತಿಹುದೆದೆಯ ಗೋಳು …
ಗೂಡು ಕಟ್ಟಿಹ ನೋವು ಮಡುವಲ್ಲೆ ನರಳುತಿದೆ
ತೋಡಿಕೊಳ್ಳುವ ಬಗೆಯ ಹೇಳು..
ನಾನೀನು ಬಗೆಯೇನು? ಹಾಲ ಬೆರೆಯದ ಜೇನು
ಮೀನು ನೀರಿರದೆ ಬದುಕಲುಂಟೆ??
ಕಾನ ಕತ್ತಲೆಯೆಲ್ಲ ಮೇಣದಂತೆಯೆ ಕರಗೊ
ದಿನಕರನ ಪ್ರಭೆ ಬೀಳಲುಂಟೆ??
ತಹಬದಿಗೆ ತರಲೆಂತು ಮೋಹವನು ಬದಿಗಿಡದೆ
ಸ್ವಾಹವಾಗುತಿಹುದಿಲ್ಲಿ ಬದುಕು..
ಕುಹುಕೋಗಿಲೆಯ ನಾದ ಕಹಿಯಾಗುತಿಹುದಲ್ಲ
ದಹಿಸುತಿದೆ ಅಹಮಿಕೆಯ ಕುಟುಕು..
ಕಡಲಿನಾಳವ ಅಳೆದು ಹಡಗು ತೇಲುವುದುಂಟೆ
ಗುಡುಗು ಸಿಡಿಲುಗಳೆಲ್ಲ ಬೇಕು ಬುವಿಗೆ..
ಹಡಿಲು ಬೀಳುವ ಇಳೆಯ ಮಡಿಲು ತುಂಬುವ ಬಯಕೆ
ಅಡಿಗಡಿಗೆ ಇರಬೇಕು ಒಡಲಿನೊಳಗೆ
ಹಣತೆ ಹಚ್ಚುವ ಸಮಯ ಗಣಿತ ಎಣಿಸಲು ಸಲ್ಲ
ಮಿಣುಕು ಮೊಂಬತ್ತಿಯೂ ಮಹತ್ತು
ತಿಣುಕದಿರು ಅಣಕಿಸುತ ಬಣದ ಬೆಂಬತ್ತದೆ
ಹೊಣೆಯೊಂದು ಹೆಗಲ ಜರೂರತ್ತು…
.……….———————-
ವಿದ್ಯಾಶ್ರೀ ಅಡೂರ್