ಕಾವ್ಯ ಸಂಗಾತಿ
ಡಾ.ಪುಷ್ಪಾವತಿ ಶಲವಡಿಮಠ
ಗಾಂಧೀ ಬರಬಹುದೇ?
“ಗಾಂಧೀ ಬರಲಿಲ್ಲ!”
ಅಲ್ಲಿಂದ ನೆಗೆದು ಬಂದ ಪ್ರಶ್ನೆ.
” ಇಂದು ಬರುತ್ತಾನೆ
ಗಾಂಧೀ”
ಇಲ್ಲಿಂದ ನೆಗೆದ ಉತ್ತರ.
ಒಳಗೊಳಗೆ ನಗು ಉಕ್ಕಿತು.
ಅಯ್ಯೋ ಹುಚ್ಚೇ!ಗಾಂಧೀ ಬರುವನೇ?!
ಬರಬಹುದು
ಅಕ್ಟೋಬರ್೨ಕ್ಕೆ ಗಾಂಧೀ….
ರಾಜಕಾರಣಿಗಳ ಭಾಷಣದ
ಅಬ್ಬರಕೆ ತಡವರಿಸಿ
ಗಾಂಧೀ ಬರಬಹುದು
ರಘುಪತಿ ರಾಘವನ ಮಂದಿರದಲಿ
ನಿಜ ರಾಮನನು
ಅರಸಲು ಗಾಂಧೀ ಬರಬಹುದು
ಅಸತ್ಯದ ಬೀದಿಯಲಿ
ಸತ್ಯ ಮಾರಾಟವಾಗುವಾಗ
ಕೊಂಡುಕೊಳ್ಳಲಾದರೂ
ಗಾಂಧೀ ಬರಬಹುದು
ಲಲನೆಯರ ತುಂಡು ಬಟ್ಟೆಯಲಿ
ಸೋರುತಿರುವ ಬಡತನವ
ನೋಡಲಾದರೂ
ಗಾಂಧೀ ಬರಬಹುದು
ಕಲಬುರ್ಗಿಯ ಕಲ್ಲೆದೆ ಸೀಳಿದ
ಗುಂಡು ಬಿಸಿರಕ್ತ ಚೆಲ್ಲಿದಾಗ
ನೆತ್ತರು ಒರೆಸಲಾದರೂ
ಗಾಂಧೀ ಬರಬಹುದು
ಸತ್ಯ-ಶಾಂತಿ-ಅಹಿಂಸೆಗಳು
ಮಂಗ ತೂಗುವ ತಕ್ಕಡಿಯಲಿ
ಸೊಟ್ಟಗಾದಾಗ ನೆಟ್ಟಗಾಗಿಸಲು
ಗಾಂಧೀ ಬರಬಹುದು
ಬರಬಹುದು ಗಾಂಧೀ?
ಮತ್ತದೇ ತಲೆ ಕೊರೆಯುವ ಪ್ರಶ್ನೆ
ಸುಟ್ಟ ಕನಸುಗಳ ಬೂದಿಯ ಮೇಲೆ
ನಡೆದು ಬರಬಹುದೇ ಗಾಂಧೀ?!
ಹೆಜ್ಜೆ ಹೆಜ್ಜೆಗೂ ತಲೆ ಎತ್ತಿದ
ಜಾತಿಯ ಮುಳ್ಳು
ಬೇಲಿಯ ಮೇಲೆ ನಡೆದು
ಬರಬಹುದೇ ಗಾಂಧೀ?!
ಸತ್ತು ಹೂತು ಹೋದ
ಸೌಹಾರ್ದತೆ-ಸಹೋದರತೆಗಳ
ಸಮಾಧಿಯ ಒಡೆದು
ಬರಬಹುದೇ ಗಾಂಧೀ?!
ಶಾಂತಿ ಮಂತ್ರ ಪಠಿಸುತ
ಮಠ-ಮಂದಿರ-ಮಸೀದಿ-ಇಗರ್ಜಿಗಳಲಿ ಗೂಡು ಕಟ್ಟಿದ
ಕೆಂಪು ಪಾರಿವಾಳಗಳ ಓಡಿಸಲು
ಬೆತ್ತ ಹಿಡಿದು ಮತ್ತೇ
ಬರಬಹುದೇ ಗಾಂಧೀ?!
ಗಾಂಧೀ ಮತ್ತೇ ಬಂದರೇ
ಗಹಗಹಿಸಿ ಈ ಲೋಕ ನಗುವುದಿಲ್ಲವೇ?!
ಬೆತ್ತಲೆಯಾಗಿಯೇ ಇರುವ
ಜಗದಲಿ
ಸತ್ಯ ಶಾಂತಿ ಅಹಿಂಸೆಯೆಂಬ
ಬಟ್ಟೆ ತೊಟ್ಟ ಫಕೀರನ
ಸ್ವಾಗತಿಸುವುದೇ ಈ ಲೋಕ?!
ಬಹುತ್ವದ ಭಾರತ
ಹೌಹಾರಿ ನಿಂತಾಗ
ಸತ್ಯಾಗ್ರಹದ ಕಟ್ಟಾಳು
ಸತ್ಯ ಶೋಧಕ
ಮತ್ತೇ ಮರಳಿ ಬರಬಹುದೇ?!
ಗಾಂಧೀ ಬರಬಹುದೇ?!
ಡಾ.ಪುಷ್ಪಾವತಿ ಶಲವಡಿಮಠ
Badidu yaccharisida hagide kawana nice mam