ಕೊನೆಯ ಸತ್ಯ
6

ಶಾಲಿನಿ ಆರ್.
ಮುಳ್ಳು ಗಿಡಗಂಟಿಗಳ ಜಾಡು
ಮುಗಿಯದ ದಾರಿಯಿದು ಬರಿ ಕಾಡು,
ಪಾಚಿ ಗಟ್ಟಿದ ನೆಲಕೆ ಆರದ ನೋವ
ಜಾರುತಿರುವ ಸಂಬಂಧಗಳ ಅವಯವ,
ಅಂತರಂಗಕಿದು ಆಳದ ಅರಿವಿಲ್ಲ
ಬರಿ ಹೂಳು ತುಂಬಿದೆ ಆಳದೆಲ್ಲೆಲ್ಲ,
ಬೆಚ್ಚಗಿನ ನೆನಪಿಗು ಚಳಿಯ ಜಾಡು
ಸದ್ದಿಲದೆ ಮುರಿಯುತಿದೆ ಮನದ ಎಲುಬಿನ ಗೂಡು,
ತರ ತರದ ಪ್ರೀತಿಗು ಮುಖವಾಡದ ತುತ್ತು,
ಬಿಂಕದಲಿ ಬೀಗುತಿದೆ ಭ್ರಮೆ’ ನನ್ನ ಸೊತ್ತು,
ಹೂಳ ತೆಗೆಯದ ಹೊರತು ಕೇಳ,
ತಿಳಿಯದು ಅಂತರಾಳದ ಮೇಳ,
ಅರಿಯಲಾರದ ನಿಜತನ ಹುಚ್ಚು ಸಂಕಲ್ಪ
ಅರಿತ ಮೇಲು ಮರುಳು ಹೆಚ್ಚು ವಿಕಲ್ಪ,
ಒಂಟಿ ಪಯಣಕಿದೆ ನೂರೆಂಟು ಅಂಟು
ದುಃಸ್ಪಪ್ನದಲು ಎಚ್ಚರವಿರದ ಇರುಳ ನಂಟು,
ನೋವ ಹೊಳೆಗೆ ಹೆಚ್ಚು ಪದಗಳ ಹರಿವು
ಏಕಾಂಗಿ ಮನಕೆ ಕಸುವು ಕೊಟ್ಟ ಅರಿವು ,
ಯಾರಿಗ್ಯಾರು ಅರಿವಿರದ ತಾರುಮಾರು
ಅರಿತವರೆಲ್ಲರು ಕೊನೆಗೆ ಶೂನ್ಯದಲಿ ಸೇರು.
********
ಕವನ ಚೆನ್ನಾಗಿದೆ. ಒಂಟಿತನದ ಬವಣೆ.