ಕಭೀ ಖುಷೀ ಕಭಿ ಘಂ ಲಹರಿ-ಆದಪ್ಪ ಹೆಂಬಾ

ಲಹರಿಸಂಗಾತಿ

ಆದಪ್ಪ ಹೆಂಬಾ

ಕಭೀ ಖುಷೀ ಕಭಿ ಘಂ

ಭಾಗ ಒಂದು

ತೀರಾ ವೈಯಕ್ತಿಕ ಕಾರಣಗಳಿಂದಾಗಿ ಮನಸ್ಸು ಒಂದು ವಾರದಿಂದ ವಿಹ್ವಲಗೊಂಡಿದೆ. ಮುಂದಿನ ಬದುಕಿನ ಕುರಿತು ಒಂದಷ್ಟು ಆತಂಕ, ಒಂದಷ್ಟು ಚಿಂತೆ, ಒಂದಷ್ಟು ನಿರಾಸೆ. ಒಟ್ಟಾರೆ ಚೈತನ್ಯವಿಲ್ಲದ ಸಪ್ತಾಹ. ಈ ನಿರುತ್ಸಾಹದ ನಡುವೆ ನನ್ನಲ್ಲಿ ಒಂದಷ್ಟು ಉತ್ಸಾಹ ಮೂಡಿಸಿದ್ದು ಮೊನ್ನೆ  ನಮ್ಮೂರಿನ ಅಷ್ಡೇ ಏಕೆ ಈ ಭಾಗದ ಹೆಸರಾಂತ ಭ್ರಮರಾಂಭ ಸೌಹಾರ್ದ ಸಹಕಾರಿಯವರು ಏರ್ಪಡಿಸಿದ್ದ ಶಿಕ್ಷಣವೇ ಚೈತನ್ಯ ಅನ್ನುವ ಕಾರ್ಯಕ್ರಮ. ಆ ಕಾರ್ಯಕ್ರಮವನ್ನು ಸಹಕಾರಿಯವರು ವಿಶೇಷವಾಗಿ ಶಿಕ್ಷಕರಿಗಾಗಿಯೇ, ಶಿಕ್ಷಕ ದಿನಾಚರಣೆಯ ಮಾಸವಾದ ಸಪ್ಟೆಂಬರ್ ನಲ್ಲಿ ಆಯೋಜಿಸಿದ್ದರು. ವಿಶಿಷ್ಟ ಪರಿಕಲ್ಪನೆಯ, ಶ್ರೀಮತಿ ವೀಣಾ ಅಠವಲೆ ಹುಬ್ಬಳ್ಳಿ ಅವರ ಏಕ ವ್ಯಕ್ತಿ ಪ್ರದರ್ಶನ ನಾಟಕ ಅದಾಗಿತ್ತು. ಮಹಾರಾಷ್ಟ್ರದ ಅನಾಥ ಮಕ್ಕಳ ತಾಯಿ, ಪದ್ಮಶ್ರೀ ಪುರಸ್ಕೃತೆ ಸಿಂಧೂತಾಯಿ ಸಪ್ಕಾಳ ಅವರ ಜೀವನ ಕುರಿತಾದ ನಾಟಕ. ಏಕ ವ್ಯಕ್ತಿ ಪ್ರದರ್ಶನ ವಾಗಿದ್ದ ಆ ಕಾರ್ಯಕ್ರಮ ದಲ್ಲಿ ಸುಮಾರು ನಲವತ್ತು ನಿಮಿಷಗಳ ಕಾಲ  ವೀಣಾ ಅವರು ಅದೆಷ್ಟು ಅದ್ಭುತವಾಗಿ ಮಾತನಾಡಿದರು ಅಂದ್ರೆ ಅವರ ಮಾತಿನುದ್ದಕ್ಕೂ ನೆರೆದಿದ್ದ ಪ್ರೇಕ್ಷಕರು ಕಣ್ಣೀರಾಗಿದ್ದರು. ಯಾವುದೇ ಆಂಗಿಕ ಅಭಿನಯವಿಲ್ಲದೇ ಕೇವಲ ಧ್ವನಿಯ ಏರಿಳಿತಗಳು, ಭಾವ ತುಂಬಿದ ಮಾತುಗಳಿಂದ ಅಷ್ಟು ಹೊತ್ತು ಇಡೀ ಸಭಾಂಗಣವನ್ನು ಹಿಡಿದಿಡುವುದು ಸುಲಭದ ಮಾತಲ್ಲ. ಅದನ್ನು ವೀಣಾ ಮೇಡಂ ಸಾಧಿಸಿದ್ದರು. ತಮ್ಮ ಪ್ರಯತ್ನದಲ್ಲಿ ಗೆದ್ದಿದ್ದರು. ಅದಕ್ಕೆ ನೆರೆದಿದ್ದ ಪ್ರೇಕ್ಷಕರ ಕಣ್ಣೀರೇ ಸಾಕ್ಷಿ. ಇನ್ನೂ ಹೆಮ್ಮೆಯ ವಿಷಯವೇನೆಂದರೆ ವೀಣಾ ಮೇಡಂ ಅವರೂ ಶಿಕ್ಷಕಿಯಾಗಿದ್ದವರು. ವೃತ್ತಿಯಿಂದ ನಿವೃತ್ತರಾಗಿದ್ದಾರಷ್ಟೆ, ವಿಶ್ರಾಂತ ಜೀವನ ನಡೆಸುತ್ತಿಲ್ಲ. ಸಿಂಧೂತಾಯಿಯವರಂತೆ ಇವರೂ ಹತ್ತಾರು ಅನಾಥ ಮಕ್ಕಳಿಗೆ ತಾಯಿಯಾಗಿದ್ದಾರೆ. ಅವರನ್ನು  ಪೋಷಿಸುವುದರ ಜೊತೆಗೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆ ಸಿಂಧೂತಾಯಿಯನ್ನು ಆವಾಹಿಸಿಕೊಂಡು ಇಡೀ ಪ್ರೇಕ್ಷಕವೃಂದವನ್ನು ಮಂತ್ರ ಮುಗ್ಧರನ್ನಾಗಿಸಿಬಿಡುತ್ತಾರೆ. ಅವರ ಸೇವೆಗೆ ಅವರ ಶಕ್ತಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಇದಕ್ಕಿಂತ ವಿಶೇಷ, ಖುಷಿಯ, ಹೆಮ್ಮೆಯ ಸಂಗತಿ ಎಂದರೆ ಅಂತಹ ಅಪರೂಪದ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ನಮ್ಮ ಹೆಮ್ಮೆಯ, ನಾನು ವಿಶೇಷವಾಗಿ ಇಷ್ಟಪಡುವ, ನಮ್ಮ ರಾಯಚೂರು ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆಯ ನಿವೃತ್ತ ಡಿಡಿಪಿಐ ಸರೂ ಆದಂತಹ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಸರು. ಮಹಿಮ ಎನ್ನುವ ಹೆಸರಿನಲ್ಲಿ ಅದ್ಬುತ ಸಾಹಿತ್ಯ ರಚಿಸುತ್ತಿರುವ ಅವರು ನನ್ನ ನೆಚ್ಚಿನ ಬರಹಗಾರರು ಮತ್ತು  ಮಾರ್ಗದರ್ಶಕರು. ಆ ಕಾರ್ಯಕ್ರಮದ ನೆಪದಲ್ಲಿ ಅವತ್ತು ಇಡೀ ದಿನ ಅವರ ಜೊತೆಗಿದ್ದದ್ದು ನನ್ನ ಪುಣ್ಯ. ಮಣಭಾರವಾಗಿದ್ದ ನನ್ನ ಹೃದಯವನ್ನು ಹಗುರ ಮಾಡಿದ್ದ ಆ ಕಾರ್ಯಕ್ರಮ ಮುಗಿದ ಮೇಲೆ ಮನಸ್ಸಿಗೆ ಮತ್ತದೇ ಮುಸುಕು, ಹತಾಶೆ, ಭವಿಷ್ಯದ ಅನಿಶ್ಚಿತತೆ. ಆಗ ಕೈಹಿಡಿದ್ದು ನನ್ನ ಈ ಅಕ್ಷರ ಪ್ರೇಮವೇ. ಎಸ್…. ಅಂತಹ ದುಗುಡದಲ್ಲೂ ನನ್ನ ಕನಸಿನ ಕನ್ನೆಗೊಂದು ಪ್ರೇಮ ಪತ್ರ ಬರೆದಿದ್ದೆ. ನಾನೇ ಬರೆದ ಆ ಪ್ರೇಮ ಪತ್ರ ಓದುವಾಗ ಮತ್ತದೇ ಕನಸ ಕನ್ನೆಯ ನಗು, ಅವಳ ಮೌನ ನನ್ನನ್ನು ಪುಳಕಿತಗೊಳಿಸಿದವು. ಮೂರ್ನಾಲ್ಕು ದಿನ ಅವಳದೇ ನೆನಪು. ಮನಸ್ಸು ಹಗುರ ಹಗುರ.
        ನಾಲ್ಕನೇ ದಿನ ಇನ್ನೇನು ಮತ್ತೆ ಮನಸ್ಸಿನ ತುಂಬ ಕರಿ ಛಾಯೆ ಆವರಿಸುತ್ತಿತ್ತೋ ಏನೋ ತಾಯಿಯಂತಹ ನನ್ನ ಮಗಳು ಬಿಡಲಿಲ್ಲ. “ಪಪ್ಪಾ ನಿಮಗ ಬೇಜಾರಾಗೈತಿ. ನಾ ಒಂದ್ ಪಿಚ್ಚರ್ ಹಚ್ಚಿಕೊಡತೀನಿ ನೋಡ್ರಿ. ಎಷ್ಡು ಚೆಂದ ಐತಂದ್ರ ನಿಮ್ಮ ಬೇಜಾರೆಲ್ಲ ಹೋಕೈತಿ” ಎನ್ನತ್ತಾ ಹಳೆಯ ಹಿಂದಿ ಚಲನ ಚಿತ್ರವನ್ನು ಹಚ್ಚಿಕೊಟ್ಟಳು…… ವ್ಹಾ…. ಆ ಸಿನೆಮಾ….. ಈಗಾಗಲೇ ನೋಡಿದ್ದೇ ಆದರೂ ಒಂಚೂರೂ ಅಲ್ಲಾಡದಂತೆ ಮತ್ತೊಮ್ಮೆ ನಾನು ಆ ಸಿನೆಮಾ ನೋಡಿದೆ. ಮನಸ್ಸೀಗ ಮತ್ತೆ ಹಕ್ಕಿಯಂತೆ ಹಾರಾಡುತ್ತಿದೆ. ಖುಷಿಯೋ ಖುಷಿ. ಯಾಕೆಂದರೆ ನನ್ನ ಮಗಳು ನೋಡಿಸಿದ್ದು ಎವರ್ ಗ್ರೀನ್ ಸಿನೆಮಾ
 ಕಭೀ ಖುಷೀ ಕಭೀ ಘಂ.
ಮುಂದಿನ ಭಾಗದಲ್ಲಿ ಅದರ ಬಗ್ಗೆಯೇ ಮಾತಾಗೋಣ. ಅಲ್ಲಿಯವರೆಗೆ ಗುಡ್ ನೈಟ್. ನಾನು ನಿರುಮ್ಮಳವಾಗಿ ಮಲಗುತ್ತೇನೆ ನೀವೂ ಮಲಗಿ. ನಮಸ್ಕಾರ
…………………

 ಆದಪ್ಪ ಹೆಂಬಾ ಮಸ್ಕಿ

Leave a Reply

Back To Top