ಕಾವ್ಯಯಾನ

ಗಝಲ್

Person Holding Red Gerbera Flower

ಎ.ಹೇಮಗಂಗಾ

ಕಾಲಚಕ್ರ ಅರೆಕ್ಷಣವೂ ವಿರಮಿಸದೇ ಉರುಳುತ್ತಲಿದೆ ನಲ್ಲೆ
ನಮ್ಮ ಪ್ರೀತಿ ಅಡೆತಡೆಯಿಲ್ಲದೇ ಬೆಳೆಯುತ್ತಲಿದೆ ನಲ್ಲೆ

ನಡೆದ ಹಾದಿಯಲಿ ಎದುರಾದ ಕಷ್ಟ ಕೋಟಲೆಗಳು ನೂರು
ಗಂಗಾ಼ಳದ ಗಂಜಿಯಲ್ಲೇ ಮೃಷ್ಟಾನ್ನದ ಸವಿ ತುಂಬಿದೆ ನಲ್ಲೆ

ನಿನ್ನೆ ಮೊನ್ನೆಯಂತೆ ನೆನಪಿನಲ್ಲಿದೆ ಸಪ್ತಪದಿ ತುಳಿದ ಘಳಿಗೆ
ದಶಕಗಳ ಅನುರಾಗದಲಿ ಈ ಬಂಧ ಬಿಗಿಗೊಂಡಿದೆ ನಲ್ಲೆ

ಹುಲ್ಲಿನ ಮನೆಯೇ ಅರಮನೆಯಾಗಿರೆ ಎಲ್ಲಿಹುದು ಕೊರತೆ ?
ನಾನು ಬಡವ ನೀನು ಬಡವಿ ಒಲವೇ ಸಿರಿಯಾಗಿದೆ ನಲ್ಲೆ

ಬಾಳಿನ ಸಂಧ್ಯಾಕಾಲವಿದು ನನಗೆ ನೀನು ನಿನಗೆ ನಾನು
ಸಾವಿನ ಮನೆಯ ಪಥದಲ್ಲೂ ಜೊತೆ ಸಾಗಬೇಕಿದೆ ನಲ್ಲೆ

*******

One thought on “ಕಾವ್ಯಯಾನ

Leave a Reply

Back To Top