ಇಂದಿರಾ ಮೋಟೆಬೆನ್ನೂರ-ದುಃಖ ಮತ್ತು ದಣಿವು

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ-

ದುಃಖ ಮತ್ತು ದಣಿವು

ಕಂಬನಿಯ ಕಡಲನೆ
ನನ್ನೊಡಲಲಿ ಸುರಿದು
ನಗೆ ಮಲ್ಲಿಗೆ ನೀ ಮುಡಿದು
ನಿಂತಾಗ ಕಣ್ಣೀರು
ನಿನ್ನ ಕಂಗಳ ತೇವಗೊಳಿಸೀತು
ಹೇಗೆ ನೀನೇ ಹೇಳು?

ದುಃಖದ ಮಡುವಲ್ಲಿ
ನನ್ನನು ನೂಕಿ
ಸುಖದ ಸಂಭ್ರಮ ನೀ ಮಿಡಿದು
ನಿಂತಾಗ ದುಃಖ ದಣಿದು
ನಿನ್ನ ಬಳಿ ಸುಳಿದೀತು
ಹೇಗೆ ನೀನೇ ಹೇಳು..?

ನೋವಿನ ಸಾಗರದಲ್ಲಿ
ನನ್ನನು ಮುಳುಗಿಸಿ
ನಲಿವಿನಲೆಯಲೀ ನೀ ತೇಲುತ
ಸಾಗಲು ನೋವು
ನಿನ್ನ ಹೃದಯ ತಾಕೀತು
ಹೇಗೆ ನೀನೇ ಹೇಳು..?

ಅಪಮಾನ ಅಪನಿಂದೆ
ಉಡುಗೊರೆಯ ಉಡಿತುಂಬಿ
ನವಸ್ನೇಹ ತಂಪಿನಲಿ ನೀ ನಲಿಯೇ
ಹೂವ ಸುಡುವ ಕಾವು ನೋವು
ನಿನ್ನೆದೆಯ ತಟ್ಟೀತು
ಹೇಗೆ ನೀನೇ ಹೇಳು…?

ಎಲ್ಲ ನಂಜನು ನನ್ನ
ಪಾಲಿಗೆ ನೀಡಿ ಅಮೃತದ ಬೆನ್ನೇರಿ
ಮುನ್ನಡೆದ ನಿನ್ನ
ಬೆಂಬತ್ತಿ ಯಾವ ದುಃಖ,
ನೋವು, ಕಂಬನಿ, ಕಾವು
ತಾನೇ ಬರಲು ಸಾಧ್ಯ…

ಸ್ನೇಹ ಬಲುಮೆ ಯಾನ
ಸೋತಿಲ್ಲ..ನಿನ್ನ ವೇಗಕ್ಕೆ ಆಮೆ ನಡಿಗೆ
ದಣಿಯದೇ ಕೂಡದೇ
ಮತ್ತೇನು ಮಾಡೀತು..?
ಮತ್ತೇನು ಮಾಡಲು ಸಾಧ್ಯ..?
ನೀನೇ ಹೇಳು….?


ಇಂದಿರಾ ಮೋಟೆಬೆನ್ನೂರ.

Leave a Reply

Back To Top