ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ನಮ್ಮ ಬದುಕಿಗೆ ನಾವೇ ಜವಾಬ್ದಾರರು

 ಹೇಗಿದ್ದೀರಿ ಎಲ್ಲರೂ? ಕ್ಷೇಮ ತಾನೇ? ಒಮ್ಮೆ ನಿಂತ ಮಳೆ ಮತ್ತೆ ಪ್ರಾರಂಭವಾಗಿದೆ. ಅದರ ಜೊತೆ ಜೊತೆಯಲ್ಲಿ ವೈರಲ್ ಜ್ವರ ಮತ್ತು ಶೀತ ಕೂಡಾ ಬಿಡದೆ ಕಾಡಿದೆ. ನಮ್ಮ ದೇಹ ನಮ್ಮ ದೊಡ್ಡ ಆಸ್ತಿ. ನಮ್ಮ ಆಸ್ತಿಗೆ ನಾವೇ ಜವಾಬ್ದಾರರು. ಆದ ಕಾರಣ ನಮ್ಮ ಆಸ್ತಿಯನ್ನು ಕಾಪಾಡಿಕೊಳ್ಳುವ ದೊಡ್ಡ ಹೊರೆ ಹಾಗೂ ಜವಾಬ್ದಾರಿ ನಮ್ಮ ಮೇಲಿದೆ. ಬೀ ಕೇರ್ಫುಲ್. ಸ್ಟೇ ಹೆಲ್ದಿ. ಒಂದು ಹಲ್ಲು ಹಾಳಾದರೆ ಕಡಿಮೆ ಅಂದರೂ ಆರು ಸಾವಿರ ರೂಪಾಯಿ, ಐದು ಸಲ ಹೋಗಿ ಅದನ್ನು ಕರೆಯಿಸಿಕೊಂಡು ಮತ್ತೆ ಹೊಸ ಕ್ಯಾಪ್ ಹಾಕಿಕೊಂಡು ಬರುವುದು. ಒಂದು ಹಲ್ಲಿನ ಬೆಲೆ ಆರು ಸಾವಿರ ಆದರೆ ಬೆಲೆ ಬಾಳುವ ಅಂಗಗಳಿಗೆ ಎಲ್ಲಾ ಸೇರಿ ನಮ್ಮ ದೇಹದ ಮೌಲ್ಯ ನಿರ್ಧಾರ ಸುಲಭ. ಮೆದುಳು ಒಂದು ಕೋಟಿಗೆ ಸರಿದೂಗುವಂಥದ್ದು. ಮೆದುಳಿನ ಕಾರ್ಯ ಸರಿಯಾಗಿ ನಡೆಯದೆ ಇರಲು ಕಾರಣ ಟೆನ್ಶನ್, ಆಹಾರ, ಉಪವಾಸ, ತಿನ್ನುವ ಪ್ರತಿ ಪದಾರ್ಥಗಳು. ನೆನಪಿರಲಿ, ನಮ್ಮ ದೇಹ ಮತ್ತು ದೇಶ ನಮ್ಮ ಬಹು ದೊಡ್ಡ ಆಸ್ತಿ

.

    ಕೆಲವೊಂದು ಜನರ ಗುಣವನ್ನು ನೋಡಿ, ಏನೇ ಆದರೂ ಪ್ರಪಂಚ ಬಿದ್ದು ಹೋದರೂ ನಗು ನಗುತ್ತಾ ಸ್ವೀಕರಿಸಿ ಬಿಡುತ್ತಾರೆ. ಅಂತಹ ಎತ್ತರಕ್ಕೆ ಏರುವುದು ಎಲ್ಲರಿಗೂ ಸಾಧ್ಯ ಇಲ್ಲ. ಈಗಿನ ಕಾಲದಲ್ಲಂತೂ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಎಲ್ಲರಿಗೂ ಟೆನ್ಶನ್. ಆ ಒತ್ತಡದ ನಡುವೆ ಆರಾಮಾಗಿ ಇರಲು ಹೇಗೆ ಸಾಧ್ಯ ಹೇಳಿ! ಯಾರ ಮಾತನ್ನೂ ಕೇಳಲು ಸಮಯ ಇಲ್ಲ. ಯಾರ ಜೊತೆ ಸರಿಯಾಗಿ ಬೆರೆಯಲು, ಮಾತನಾಡಲು ಸಮಯ ಇಲ್ಲ. ಕಾರ್ಯಕ್ರಮಗಳಿಗೆ ಹೋದರೆ ಕುಳಿತು ಮಾತನಾಡಲು ಸಮಯವೇ ಇಲ್ಲ! ಎಲ್ಲಾ ಕಡೆ ಅರ್ಜೆಂಟ್! ಸಮಯ ಇಲ್ಲದೆ ವೇಗವಾಗಿ ಡ್ರೈವ್ ಮಾಡಿಕೊಂಡು ಹೋಗಿ ನೇರವಾಗಿ ಯಮನ ಪಾದ ಸೇರಿದವರು ಅದೆಷ್ಟೋ! ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಸಾವು ಖಚಿತ ತಾನೇ? ಇದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ನಾಲ್ಕು ದಿನದ ಈ ಬದುಕಿನಲಿ ಸದಾ ಒತ್ತಡ, ಬೇರೆಯವರ ಮೇಲೆ ಹೊಟ್ಟೆಕಿಚ್ಚು, ದ್ವೇಷ, ಕೋಪ, ಮತ್ಸರ ಇದೆಲ್ಲ ಯಾಕಾಗಿ! ಜೀವನದಲ್ಲಿ ನೆನಪಿಡಬೇಕಾದ ಅಂಶ ಎಂದರೆ ಪಕ್ಕದ ಮನೆಯವರು, ಪಕ್ಕದಲ್ಲಿ ಇರುವವರು, ಜೊತೆಯಲ್ಲಿ ಇರುವವರು ನಮ್ಮ ಶತ್ರುಗಳಲ್ಲ, ನಮ್ಮ ಸ್ಪರ್ಧಿಗಳು ಕೂಡ ಅಲ್ಲ. ನಮ್ಮ ಸ್ಪರ್ಧಿಗಳು ನಾವೇ ಆಗಬೇಕು. ನಮ್ಮ  ಈ ವರ್ಷದ ದಾಖಲೆಯನ್ನು ಮುಂದಿನ ವರ್ಷ ನಾವೇ ಮುರಿಯಬೇಕು. ಪಕ್ಕದ ಮನೆಯವರ ಹಾಗೆ ಟಿವಿ , ಫ್ರಿಡ್ಜ್, ಬಟ್ಟೆ, ಸೀರೆ ತೆಗೆದುಕೊಳ್ಳದೆ ಇದ್ದರೂ ಪರವಾಗಿಲ್ಲ, ನಾನು ಯಾರಿಗೂ ಕೆಟ್ಟದು ಮಾಡಲಿಲ್ಲ, ನಾನು ಹಲವಾರು ಜನರಿಗೆ ಸಹಾಯ ಮಾಡಿದ್ದೇನೆ, ನಾನು ಇಂತಹ ಸಾಧನೆ ಮಾಡಿದ್ದೇನೆ ಮೊದಲಾದ ಹೆಮ್ಮೆಯಿಂದ ನಮ್ಮ  ಬಗ್ಗೆ ನಾವೇ ಹೇಳಿಕೊಳ್ಳುವ  ಕೆಲವು ವಾಕ್ಯಗಳು ನಮ್ಮಲ್ಲಿ ಇರಬೇಕು.
       ನಾವು ಇನ್ನೊಬ್ಬರ ಜೊತೆ ಸೇರಿದಾಗ ಮೂರನೆಯವರ ಬಗ್ಗೆ  ಮಾತನಾಡುವುದನ್ನು ಬಿಟ್ಟು ನಮ್ಮ ಬಗ್ಗೆ ಮಾತನಾಡಲು ಮೂರನೆಯವರಿಗೆ ಅವಕಾಶ ಮಾಡಿ ಕೊಡೋಣ. ಕೆಲವರು, ಹಲವರು, ಹೊರಗಿನವರು, ಬಂಧುಗಳು, ಮಿತ್ರರು, ಶತ್ರುಗಳು, ಪಕ್ಕದ ಮನೆಯವರು, ಗೆಳೆಯರು, ಪರಿಚಯದವರು, ಪರಿಚಯ ಇಲ್ಲದವರು ಎಲ್ಲರೂ ನಮ್ಮ ಬಗ್ಗೆ ಮಾತನಾಡಲಿ. ಆಗಲೇ ಅಲ್ಲವೇ ನಾವು ಪ್ರಖ್ಯಾತರಾಗುವುದು! ನೋಡಿ ಎಲ್ಲರೂ ಗಾಂಧೀಜಿ, ನೆಹರು, ಸ್ವಾಮಿ ವಿವೇಕಾನಂದ, ಸುಧಾ ಮೂರ್ತಿ, ಮೋದಿ, ಸಿದ್ಧರಾಮಯ್ಯ ಇವರ ಬಗ್ಗೆ ಮಾತನಾಡುತ್ತಿರುತ್ತಾರೆ. ಯಾರೆಲ್ಲ ಹಿಂದೆ ಮಾತನಾಡಿದರೂ ಅವರೆಲ್ಲ ಮೇಲೆಯೇ, ಮುಂದೆಯೇ ಇದ್ದಾರೆ. ಯಾರು ಹೇಗೆ ಮಾತನಾಡಿದರೂ ಮಾತನಾಡಲು ವಸ್ತು ಆದವರು ತಗ್ಗಾಗಲಾರರು. ಅವರ ಪ್ರಖ್ಯಾತಿ ಹೆಚ್ಚುತ್ತಲೇ ಹೋಗುತ್ತದೆ. ನಾವೂ ಅಷ್ಟೇ. ಬೇರೆಯವರಿಗಿಂತ ಮುಂದಿರಬೇಕು. ಅವರು ನಮ್ಮ ಬಗ್ಗೆ ಮುಂದಿನಿಂದಲೂ ಹಿಂದಿನಿಂದಲೂ ಮಾತನಾಡುವ ಹಾಗಿರಬೇಕು. ಆದರೆ ಒಂದು ಅಂಶ ಇಷ್ಟೇ, ಮುಂದೆ ಹಾಗೂ ಹಿಂದೆ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ಕಾರ್ಯ ನಾವು ಮಾಡಬಾರದು.


    ಆದರೆ ನಾವು ಒಳ್ಳೆಯದಕ್ಕೇ , ಒಳ್ಳೆಯದನ್ನೇ ಮಾಡಿದರೂ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವವರು ಸಿಕ್ಕೇ ಸಿಗುತ್ತಾರೆ. ಏಕೆಂದರೆ ಪ್ರತಿಯೊಬ್ಬರೂ ಅವರವರ ಮಟ್ಟಕ್ಕೆ ಮಾತನಾಡುತ್ತಾರೆ ಅಲ್ಲವೇ? ಕೆಟ್ಟದಾಗಿ ಮಾತನಾಡುವವರ ಮನಸ್ಸು ಕೆಟ್ಟದಾಗಿದೆ ಎಂದು ಅರ್ಥವೇ ಹೊರತು, ಅವರು ಯಾರ ಬಗ್ಗೆ ಮಾತನಾಡುವರೋ ಅವರು ಕೆಟ್ಟವರು ಎಂದು ಅರ್ಥ ಅಲ್ಲ. ಹಾಗಾಗಿ ಯಾರನ್ನು ಯಾರು ದೂರುವರೋ, ಲಾಭ ಯಾರಿಗೋ ನಾವೇ ಅರಿಯಬೇಕು.
     ಏನೇ ಇರಲಿ. ನಮ್ಮನ್ನು ನಾವೇ ಎತ್ತರಕ್ಕೆ ಏರಿಸಿಕೊಳ್ಳಬೇಕು. ನಮ್ಮ ಕೈ ಹಿಡಿದು ನಡೆಸಲು ಬರುವುದು ದೇವರು ಮಾತ್ರ. ಅವನೂ ಆಗಾಗ ಮುಂದಿನ ತರಗತಿಗೆ ನಮ್ಮನ್ನು ಕಳುಹಿಸಲು ಪರೀಕ್ಷೆ ಕೊಡುತ್ತಲೇ ಇರುತ್ತಾನೆ. ಕಷ್ಟಪಟ್ಟು ಓದಿ ಪಾಸ್ ಆಗಿ ಮುಂದಿನ ಜೀವನಕ್ಕೆ ಕಾಲಿಡಬೇಕಿದೆ. ನಮ್ಮ ಬದುಕಿಗೂ, ನಮ್ಮ ಆರೋಗ್ಯಕ್ಕೂ, ನಮ್ಮ ದೇಹಕ್ಕೂ, ನಮ್ಮ ಮನಸ್ಸಿಗೂ, ನಮ್ಮ ವ್ಯಕ್ತಿತ್ವಕ್ಕೂ, ನಮ್ಮ ಮಾತಿಗೂ, ನಮ್ಮ ನಡೆ ನುಡಿಗೂ ನಾವೇ ಜವಾಬ್ದಾರಿ ಅಲ್ಲವೇ? ಚೆನ್ನಾಗೇ ಕಾಯ್ದುಕೊಳ್ಳೋಣ. ನೀವೇನಂತೀರಿ?

————————————————————

ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

One thought on “

  1. ನಿಜ. ನಮ್ಮ ಬದುಕಿಗೆ ನಾವೇ ಜವಾಬ್ದಾರರು. ಸುಂದರ ‌ಲೇಖನ. ಧನ್ಯವಾದಗಳು! ( Angelina. G)

Leave a Reply

Back To Top