ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಭಾಗ-5

10 Fun Games To Play At The Park With Your Kids

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ

ಯಾರದ್ದೋ ತಪ್ಪಿಗೆ ಯಾರಿಗೋ ಶಿಕ್ಷೆ.

‘ಅಮ್ಮಾ ನನ್ನ ಜೊತೆ ಆಟಾ ಆಡು ಬಾ ಎಂದು ನಾಲ್ಕು ವರ್ಷದ ಪುಟ್ಟ ಶಿಶಿರನ ಕರೆ ಕೂಗಾಟ ಚೀರಾಟವಾದರೂ ಆ ಅಮ್ಮನಿಗೆ ಅಡುಗೆ ಮನೆಯಲ್ಲಿ ಕೆಲಸ ಮುಗಿಯುವುದಿಲ್ಲ. ತೊಳೆದಷ್ಟೂ ಮುಗಿಯದ ಮುಸುರೆ ಪಾತ್ರೆಗಳು, ಬಟ್ಟೆಗಳು …ಬಿಡುವೆಲ್ಲಿದೆ?ಈಗಿನ್ನೂ ತಿಂಡಿ ತಿಂದಾಗಿದೆ ಆದರೆ ಮತ್ತೆ ಅಡುಗೆ ಮಾಡುವ ಸಮಯ ಬಂದೇ ಹೋಯ್ತು ಎನ್ನುವ ಟೆನ್ಶನ್ ನಲ್ಲಿ ಮಗುವಿನೊಂದಿಗೆ ಸಂತೋಷವಾಗಿ ಆಟ ಆಡಲಾಗುವುದೇ..


ಮೊದಲಿನಂತೆ ಗಂಡನೂ ಆಫೀಸಿಗೆ ಹೋಗುತ್ತಿಲ್ಲ. ಮೊಬೈಲ್ ನೋಡುತ್ತ ನ್ಯೂಸ್ ಕೇಳುತ್ತ ಟೈಂಪಾಸ್ ಮಾಡುವ ಬದಲು ಮಗನ ಜೊತೆ ಕೊಂಚ ಆಟ ಆಡಿದರೆ ಆಗುವುದಿಲ್ಲವೇ? ಎಂಬ ಸಿಡಿಮಿಡಿಯನ್ನು ಮನದಲ್ಲೇ ಹುಗಿದು ‘ಕಳ್ಳ ಪೋಲಿಸ್ ಆಡೋಣವೇ ಮಗನೇ?’ ಕೇಳಿದಳು. ಅಮ್ಮ ಆಟಕ್ಕೆಂದು ಬಂದೊಡನೆ ಮಗುವಿನ ಮೂಡ್ ಬದಲಾಗಿ ಹೋಯ್ತು ಆ ಪುಟ್ಟ ಮನೆಯ ಮೂಲೆ ಮೂಲೆಯಲ್ಲಿ ಅವಿತು ಕುಳಿತ ಕಳ್ಳನನ್ನು ಅಮ್ಮ ಪೋಲೀಸ್ ಹುಡುಕಿದ್ದೇ ಹುಡುಕಿದ್ದು. ಒಂದೆರಡು ದಿನ ಪ್ರೇಕ್ಷಕನಾದ ಅಪ್ಪನೂ ಕ್ರಮೇಣ ಆಟದಲ್ಲಿ ಸೇರಿಕೊಂಡ.. ಎಲ್ಲಾ ಲಾಕ್ ಡೌನ್ ಮಹಾತ್ಮೆ.. ಮನೆಯ ಬಾಗಿಲು ಕಿಟಕಿ ಮುಚ್ಚಿದರೆ ಪುಟ್ಟ ಮಕ್ಕಳ ಕ್ರಿಯಾಶೀಲತೆ ಮುಚ್ಚಿಡಲಾಗುವುದೇ? ದಿನವಿಡೀ ಆಡುವ ಉತ್ಸಾಹ, ಪ್ರಶ್ನೆ ಕೇಳುವ ಕುತೂಹಲ, ಅತ್ತಾದರೂ ತನಗೆ ಬೇಕಾಗಿದ್ದನ್ನು ಗಿಟ್ಟಿಸಿಕೊಳ್ಳುವ ಮಕ್ಕಳಿಗೆ ಲಾಕ್ ಡೌನ್ ಒಂದರ್ಥದಲ್ಲಿ ಶಿಕ್ಷೆ ಎನಿಸಿದರೂ ಇನ್ನೊಂದು ಅರ್ಥದಲ್ಲಿ ಸಂತೋಷವನ್ನೂ ತಂದಿದೆ.


ನಗರವಾಸಿಗಳಲ್ಲಿ ಅಪ್ಪ ಅಮ್ಮ ಇಬ್ಬರೂ ಉದ್ಯೋಗಿಗಳಾಗಿದ್ದರಂತೂ ಇಬ್ಬರೂ ಮಗುವಿಗೆ ಕೊಡುವುದು ಸಂಜೆಯಿಂದ ಮುಂಜಾನೆಯವರೆಗೆ ಮಾತ್ರ. ಉಳಿದಂತೆ ಪುಟ್ಟ ಮಕ್ಕಳು ಶಾಲೆ, ಬೇಬಿಸಿಟ್ಟಿಂಗ್ ನಲ್ಲೇ ಕಳೆಯಬೇಕು. ದಿನವಿಡೀ ದುಡಿದು ದಣಿವ ಅಪ್ಪ ಅಮ್ಮಂದಿರಿಗೆ ಆಟ ಅಡುವ ಹುಮ್ಮಸ್ಸಿರುವುದು ಅಷ್ಟಕ್ಕಷ್ಟೇ.


ಕೊನೆಪಕ್ಷ ಈ ಬಿಡುವಿನಲ್ಲಾದರೂ ಹೆತ್ತವರು ಮಕ್ಕಳ ಕುತೂಹಲಕ್ಕೆ ತಕ್ಕ ಉತ್ತರ ಕೊಡಲಿ. ಮುಚ್ಚಿದ ಬಾಗಿಲ ಮನೆಯಲ್ಲಿ ಮಕ್ಕಳ ಜೊತೆ ಮೈದಣಿಯುವಂತಹ ಆಟ ಆಡಲಿ, ಹಾಡು ಹೇಳಲಿ, ಮತ್ತೊಮ್ಮೆ ಬಾಲ್ಯವನ್ನು ಸವಿಯುವಂತಾಗಲಿ, ಅಮ್ಮಂದಿರ ಕಷ್ಟವನ್ನು ಅಪ್ಪಂದಿರೂ ಅರಿಯುವಂತಾಗಲಿ.. ಎಂದು ಹಾರೈಸುವಷ್ಟರಲ್ಲಿ ಪಕ್ಕದ ಮನೆಯಲ್ಲಿ ಎಳೆಯ ಕಂಠವೊಂದು ‘ಮನೆಯ ಬಾಗಿಲು ತೆಗೆಯಮ್ಮಾ.. ಪಾರ್ಕಿಗೆ ಹೊಗೋಣಾ ಎಂದು‌ ಹೇಳಿದ್ದು ಕೇಳಿತು.. ಬೇಡ ಮಗು ಅಲ್ಲೆಲ್ಲಾ ಕೊರೋನಾ ಹುಳು ಇರುತ್ತೆ ಕಚ್ಚಿದರೆ ಜ್ವರಾ ಬರುತ್ತೆ ಹೋಗಬಾರದು ಮಗು ಎಂದು ಅಮ್ಮ ನಂಬಿಸುತ್ತಿರುವುದೂ ಕೇಳಿ ಬಂತು..

ಅಂತ್ಯವರಿಯದ ಈ ದಾರಿಯಲ್ಲಿ ಸಾಗುವುದೆನಿತು ದಿನ?

ಹಿಂದೆಲ್ಲ ಮುಂದಿನ ತಲೆಮಾರಿನವರು ತಿನ್ನಲೆಂದು ಒಳ್ಳೆಯ ಹಣ್ಣಿನ ಗಿಡಗಳನ್ನು, ತೆಂಗಿನ ಗಿಡಗಳನ್ನು ನೆಡುತ್ತಿದ್ದರು. ನಾವೇಕೆ ಎಳೆಯರಿಗೆ ಇಂತಹ ದಿನಗಳನ್ನು ತಂದಿಟ್ಟೆವು?

*****************************************

ಮುಂದುವರಿಯುವುದು

ಮಾಲತಿ ಹೆಗಡೆ

Leave a Reply

Back To Top