ಕಾವ್ಯಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್
ಗಜಲ್ ಮಾತ್ರೆ ೨೭)
ಹೃದಯ ಗೂಡಲಿ ಒಲವ ದೀಪ ಹಚ್ಚಿರುವೆ ಹೇಳದಿರು ವಿದಾಯ
ಪ್ರೀತಿಯ ಸುಳಿಗೆ ಸಿಲುಕಿ ಹುಚ್ಚಿಯಾಗಿರುವೆ ಹೇಳದಿರು ವಿದಾಯ
ಸರೋವರದಲಿ ಜೋಡಿ ಹಂಸಗಳು ಆಡುತಿವೆ ಜಲಕ್ರೀಡೆಯ
ಜೊತೆಯಲಿ ರಾಸಲೀಲೆ ಆಡ ಬಯಸಿರುವೆ ಹೇಳದಿರು ವಿದಾಯ
ಮಳೆ ನಿಂತು ನಭದಿ ಇಂದ್ರಧನು ಮೂಡಿ ಸಿಂಗರಿಸಿದೆ ಪ್ರಕೃತಿಯ
ನಯನದಿ ರೂಪ ತುಂಬಿ ನಿದಿರೆ ತೊರೆದಿರುವೆ ಹೇಳದಿರು ವಿದಾಯ
ಭಜಿಸುವ ಕೀಟ ಕೋಶದಿ ಪತಂಗವಾಗಿ ಬರಲು ಬಯಸುತಿದೆ
ನಿನ್ನ ಧ್ಯಾನಿಸುತ ಲೋಕವ ಮರೆತಿರುವೆ ಹೇಳದಿರು ವಿದಾಯ
ಭವ ಸಾಗರದ ನೌಕೆಯನು ದಡ ಸೇರಿಸದೆ ಬಳಲಿ ಬೆಂಡಾದೆ
ಸೋತ ಮನಕೆ ಗೆಲುವಿನ ಪ್ರಭೆ ತುಂಬಿರುವೆ ಹೇಳದಿರು ವಿದಾಯ
ಪ್ರಭಾವತಿ ಎಸ್ ದೇಸಾಯಿ
ಸುಂದರವಾದ ಭಾವಗಳ ಅಭಿವ್ಯಕ್ತಿ ಮೇಡಂ, ಧನ್ಯವಾದಗಳು
ಸೊಗಸಾಗಿದೆ ಮೇಡಂ