ಅವನಿಗೆ ನಾಳೆ ಬಾ ಎನ್ನಿ

ಕೊರೋನಾ
ಅವನಿಗೆ ನಾಳೆ ಬಾ ಎನ್ನಿ

ಡಿ.ಯಶೋದಾ

ಕೊರೋನಾ

ಅವನಿಗೆ ನಾಳೆ ಬಾ ಎನ್ನಿ

ಇತ್ತೀಚೆಗೆ ಪ್ರತಿದಿವಸ ಅವನು ಕನಸಿನಲ್ಲಿ ಬರುತ್ತಾನೆ, ತನ್ನ ಜೊತೆ ಬಂದುಬಿಡು ಎಂದು ಬಲವಂತ ಮಾಡುತ್ತಾನೆ, ನನಗೂ ಅವನೊಂದಿಗೆ ಹೋಗಿಬಿಡುವ ಮನಸ್ಸಾಗುತ್ತಿದೆ.ನಿಜ ಹೇಳಬೇಕೆಂದರೆ ಹಗಲೆಲ್ಲಾ ಅವನನ್ನೇ ನೆನಪಿಸಿಕೊಳ್ಳುತ್ತಿರುತ್ತೇನೆ, ಇರುಳಲ್ಲಿ ಅವನು ಬಂದು ಕರೆಯುತ್ತಾನೆ. ಇಲ್ಲಿ ಇದ್ದು ನಾನು ಮಾಡುವುದಾದರೂ ಏನಿದೆ? ಹೋಗಿಬಿಡಲೇ?…ಹೋಗಿಬಿಡಲೇ ಎಂದು ಕೇಳುವ ಆಕೆಯಮನಸ್ಸು ಅರ್ಥವಾಗಿತ್ತು ಹಾಗೆಯೇ ನನ್ನ ಮನಸ್ಸುಆರ್ದ್ರವಾಯಿತು..

ಕರೆಯುವವನು ಜೀವ ಕೊಡುವವನಾಗಿದ್ದರೆ ಹೋಗಿಬಿಡು ಎನ್ನಬಹುದಿತ್ತು, ಆದರೆ ಜೀವ ತೆಗೆಯುವವನ ಜೊತೆ ಕಳುಹಿಸುವುದು ಹೇಗೆ?

ಇನ್ನೊಬ್ಬರದು ಇನ್ನೂ ವಿಚಿತ್ರ ಲೆಕ್ಕಾಚಾರ- ಹಿಂದೆಯೆಲ್ಲ ನನಗೆ ಸರಿಯಾದ ಕಾರಣ ದೊರೆತಿರಲಿಲ್ಲ. ಈಗ ನನಗೆ ಬರೆದಿಡಲು ಒಂದು ಒಳ್ಳೆಯ ಕಾರಣವಿದೆ, ಇದನ್ನು ಬಹಳಷ್ಟು ಜನ ಒಪ್ಪಿಕೊಳ್ಳಬಹುದು. ಹಾಗಾಗಿ ನಾನು ಅದಕ್ಕೆ ಪ್ರಯತ್ನಿಸಲೇಬೇಕು.ಅವರ ಸ್ಪಷ್ಟ ನುಡಿಗಳು ನನ್ನನ್ನು ಬೆಚ್ಚುಬೀಳಿಸಿದವು.

ಇಂಥ ಪ್ರಕರಣಗಳು ಒಂದು, ಎರಡು ಮಾತ್ರವಲ್ಲ. ಕೊರೊನಾ ಲಾಕ್ಡೌನ್ನಿಂದಾಗಿ ಯಾರನ್ನೂ ಭೇಟಿಯಾಗದ ಕಾರಣ ಆನ್ಲೈನ್ನಲ್ಲೇ ಕೌನ್ಸೆಲಿಂಗ್ ನಡೆಯುತ್ತಿದ್ದು,ಕೌನ್ಸೆಲಿಂಗ್ ಮೊರೆ ಹೋಗುತ್ತಿರುವವರೂ ಹೆಚ್ಚಾಗಿದ್ದಾರೆ. ಕೆಲವು ಮಹಿಳೆಯರು ಈ ರೀತಿ,ಜೀವನದಿಂದ ವಿಮುಕ್ತರಾಗಿ ಸಾವಿನ ಬಗ್ಗೆ ಆಸಕ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಕೆಲವರಂತೂ ಈಗ ಆತ್ಮಹತ್ಯೆಗೆ ದೇವರೇ ತಮಗೆ ದಾರಿ ತೋರಿಸಿದ್ದಾನೆ ಎನ್ನುತ್ತಿದ್ದಾರೆ.

ಇಡೀ ವಿಶ್ವವೇ ಕೊರೊನಾ ಮಾರಕ ರೋಗದ ಮುಕ್ತಿಗಾಗಿ ಶ್ರಮಿಸುತ್ತಿದೆ. ವೈದ್ಯೋ ನಾರಾಯಣೋ ಹರಿಃ ಎನಿಸಿಕೊಂಡವರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಇತರರ ಪ್ರಾಣ ಉಳಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಸಮಾಜದಲ್ಲಿ ಸಾಮರಸ್ಯ ಕಾಪಾಡಲು

woman sitting on wing chair

ಸಂಬಂಧಿಸಿದವರೆಲ್ಲಾ ಟೊಂಕ ಕಟ್ಟಿ ಶ್ರಮಿಸುತ್ತಿದ್ದಾರೆ. ಜೀವ ಉಳಿಸಿಕೊಳ್ಳುವುದೇ ಒಂದು ಸಾಧನೆ ಎಂಬ ರೀತಿಯಲ್ಲಿ ಎಲ್ಲರೂ ಬದುಕುತ್ತಿರುವಾಗ ಇದಕ್ಕೆ ವ್ಯತಿರಿಕ್ತವಾಗಿ ತಮಗೆ ಸಾಯಲು ಒಂದು ಕಾರಣ ಸಿಕ್ಕಿತೆಂದು, ಸಾವಿನ ಕನಸೇ ಬೀಳುತ್ತದೆಂದು, ಯಮ ಬಂದು ಕರೆಯುತ್ತಿದ್ದಾನೆಂದು, ಇಲ್ಲಿಯವರೆಗೂ ಹೇಗೋ ಬದುಕಿದ್ದಾಯಿತು, ಇನ್ನು ಬದುಕುವುದು ಬೇಡ ಎಂದು ಕೊರೊನಾವನ್ನೇ ನೆಪ ಮಾಡಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸುವುದು ಯಾರೂ ಒಪ್ಪುವಂತಹದ್ದಲ್ಲ.

ಸಹಜ ಸಾವಲ್ಲದೆ ಅನಾರೋಗ್ಯ, ಅಪಘಾತ, ಇನ್ನಿತರ ಸಂಧರ್ಭಗಳಲ್ಲೂ ಅವುಗಳಿಂದ ತಪ್ಪಿಸಿಕೊಂಡು ಸಾವನ್ನು ದೂರ ಮಾಡಿಕೊಳ್ಳುವುದೇ ಜೀವನದ ಸಾರ್ಥಕತೆ. ಹೀಗಿರುವಾಗ ಆತ್ಮಹತ್ಯೆ ಸರಿಯೇ?

ಕೊರೊನಾ ಸಲುವಾಗಿ ಎಲ್ಲಾ ಕಡೆ ಲಾಕ್ಡೌನ್ ಆಗಿರುವ ಹಿನ್ನೆಲೆಯಲ್ಲಿ ಕೆಲವರು ತೀವ್ರ ಖಿನ್ನತೆಗೆ ಗುರಿಯಾಗಿದ್ದಾರೆ. ಇವರಲ್ಲಿ ಕೆಲವರು ಮೊದಲಿನಿಂದಲೂ ಖಿನ್ನತೆಗೆ ಒಳಗಾದವರು, ಇನ್ನೂ ಕೆಲವರು ಇತ್ತೀಚೆಗೆ ಖಿನ್ನತೆಗೆ ಹತ್ತಿರವಾಗುತ್ತಿರುವವರು. ಕೊರೊನಾ ಯಾರೋ ಒಬ್ಬರ ಮೇಲೆ ದಾಳಿ ಮಾಡಿಲ್ಲ, ಇಡೀ ವಿಶ್ವವನ್ನೇ ಆಕ್ರಮಿಸಿಕೊಂಡಿದೆ. ಇಂತಹ ಸಂಕ್ರಮಣ ಕಾಲದಲ್ಲಿ ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳದೇ, ಆರೋಗ್ಯಕ್ಕಷ್ಟೇ ಗಮನಕೊಟ್ಟು, ಎಚ್ಚರಿಕೆಯಿಂದ ಜೀವ ಕಾಪಾಡಿಕೊಡರೆ ಮುಂದೆ ಜೀವನ.

ಆತ್ಯಹತ್ಯೆಯ ಕುರಿತು ಯೋಚಿಸುತ್ತಿರುವವರ ಬಗ್ಗೆ ಅವರ ಕುಟುಂಬ ಸದಸ್ಯರು, ಆಪ್ತರಿಗೆ ಮೊದಲು ಗೊತ್ತಾಗುತ್ತದೆ. ತಕ್ಷಣ ಗಮನ ವಹಿಸಿದರೆ ಆತ್ಮಹತ್ಯೆ ತಡೆಗಟ್ಟಬಹುದು. ವ್ಯಕ್ತಿ ಅನುಭವಿಸುತ್ತಿರುಬಹುದಾದ ತಳಮಳ, ಕಷ್ಟಗಳ ಬಗ್ಗೆ ತಿರಸ್ಕಾರದಿಂದ ನೋಡದೆ, ಅವರನ್ನು ಗಂಭೀರವಾಗಿ ಪರಿಗಣಿಸಿ, ಸಾಂತ್ವನ ನೀಡಬೇಕಾಗುತ್ತದೆ

ಯಾವುದೋ ಒಂದು ಸಂದರ್ಭದಲ್ಲಿ ಕೆಲವರಿಗೆ ಆ ರೀತಿ ತೀವ್ರವಾಗಿ ಅನಿಸಬಹುದು, ಸರಿಯಾದ ಮಾರ್ಗದರ್ಶನ, ಅಗತ್ಯವಿರುವವರಿಗೆ ಚಿಕಿತ್ಸೆ ಸಿಕ್ಕ ಮೇಲೆ ಆಆಲೋಚನೆಯಿಂದ ದೂರಾಗುತ್ತಾರೆ

.

ವಿವಿಧ ರೀತಿಯ ನ್ಯೂನತೆಗಳಿಂದ ಹುಟ್ಟಿದ ಹಲವಾರು ಜನರು ಯಾವುದೇ ಸಮಸ್ಯೆ ಇರದವರಿಗಿಂತಲೂ ಚೆನ್ನಾಗಿ ಬದುಕುತ್ತಿರುವ ಉದಾಹರಣೆಗಳಿವೆ. ಅಪಘಾತಗಳಿಂದ ದೈಹಿಕ ತೊಂದರೆಗಳಿಗೆ ತುತ್ತಾದವರೂ ಸಹ ನ್ಯೂನತೆಗಳನ್ನೇ ಅಪ್ಪಿಕೊಂಡು ಬದುಕನ್ನು ಒಪ್ಪಮಾಡಿಕೊಂಡಿದ್ದಾರೆ. ನಾನು ಪಡುವ ಕಷ್ಟ ಯಾರಿಗೂ ಇಲ್ಲ ಎಂದು ಹೇಳಲಾಗುವುದಿಲ್ಲ, ಎಲ್ಲರಿಗೂ ಕಷ್ಟವೇ. ಒಬ್ಬೊಬ್ಬರದು ಒಂದೊಂದು ಬಗೆ. ಈಗ ಕೊರೊನಾದಿಂದ ನಮ್ಮ ಜೀವನ ಕ್ರಮದಲ್ಲಿ ಸ್ವಲ್ಪ ಏರುಪೇರು ಆಗಿರುವುದು ನಿಜ. ಅದರಿಂದ ನಾವು ಇನ್ನಷ್ಟು ಗಟ್ಟಿಗೊಳ್ಳಬೇಕು. ಈ ಪರಿಸ್ಥಿತಿಯಿಂದ ಪಾರಾಗಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಎಚ್ಚರಿಕೆಯೇ ಗುರಿ,

ಸ್ವಚ್ಛತೆಯೇ ಬದುಕು, ಆರೋಗ್ಯವಾಗಿ ಬದುಕುವುದೇ ಈಗ ದೊಡ್ಡ ಸಾಧನೆಯಾಗಿದೆ; ಎಲ್ಲರೂಸಾಧಕರಾಗೋಣ.

ಪ್ರತಿದಿನ ಒಂದಿಬ್ಬರು ಆತ್ಮೀಯರೊಡನೆ ಮಾತುಕತೆ, ಅವರು ಇಂದಿನ ಸಂಧರ್ಭದಲ್ಲಿ ಹೇಗೆ ತಮ್ಮ ದಿನಚರಿಯನ್ನು ರೂಢಿಸಿಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು, ತೀರ ಕಷ್ಟದಲ್ಲಿರುವವರ ಪರಿಸ್ಥಿತಿಯ ಅವಲೋಕನ, ಸಾಧ್ಯವಾಗುವುದಾದರೆ ಈ ಸಂದರ್ಭದ ಕಾರಣವಾಗಿ ಸಂಕಷ್ಟಕ್ಕೆ ಗುರಿಯಾದವರಿಗೆ ಕೈಯಲ್ಲಾದ ಸಹಾಯ ಮಾಡುವುದು… ಈ ಮೂಲಕ ಜೀವನ ಉತ್ಸಾಹವನ್ನು ಕಾಯ್ದಿಟ್ಟುಕೊಂಡು ಮುಂದಿನ ದಾರಿಯ ಬಗ್ಗೆ ಯೋಚಿಸಬೇಕು.

ನೀವು ಎಷ್ಟು ಎಚ್ಚರಿಕೆಯಿಂದ ಇರುತ್ತೀರೋ ಅಷ್ಟು ನೀವು ಸುರಕ್ಷಿತರು ಹಾಗೂ ನಿಮ್ಮ ಸುತ್ತಮುತ್ತಲಿನವರು ಸುರಕ್ಷಿತರಾಗಿರುತ್ತಾರೆ. ನೀವು ಬದುಕಿದ್ದರಲ್ಲವೇ ಎಲ್ಲಾ? ಹಾಗಾಗಿ ಯಾವತ್ತೂ ಯಮನನ್ನು ನೆನಪಿಸಿಕೊಳ್ಳಬೇಡಿ, ಕರೆಯಬೇಡಿ, ಅವನು ಕರೆದಾಗೆಲ್ಲಾ ನಾಳೆ ಬಾ ಎನ್ನಿ.

************* ನಾಳೆ ಬಾ ಎನ್ನಿ **************

                               

Leave a Reply

Back To Top