ಲಿಂಗಸುಖಿಗಳ ಸಂಗದಲ್ಲಿ ದಿನಗಳ ಕಳೆವೆನು.ಡಾ.ದಾನಮ್ಮ ಝಳಕಿಯವರ ಬರಹ

ವಿಶೇಷ ಲೇಖನ

ಡಾ.ದಾನಮ್ಮ ಝಳಕಿ

ಲಿಂಗಸುಖಿಗಳ ಸಂಗದಲ್ಲಿ ದಿನಗಳ ಕಳೆವೆನು.

ಅಕ್ಕಮಹಾದೇವಿಯವರದು ಶರಣ ಚಳುವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವವಾಗಿದೆ.  ಅಕ್ಕಮಹಾದೇವಿಯವರ ಜೀವನ  ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವ ಪೂರ್ಣವಾದ , ನಡೆ ನುಡಿಗಳೊಂದಾದ ಪರಿಯಲ್ಲಿರುವುದು. ಶರಣಸತಿ ಲಿಂಗಪತಿ ಎಂಬ ಭಾವವು ಅರಳಿ ಅಧ್ಯಾತ್ಮಸಂಸ್ಕಾರ ಆತ್ಮದಲ್ಲಿ ಬೆರೆತ ಭಾವವನ್ನು ಅಕ್ಕನಲ್ಲಿ ಕಾಣಸಿಗುತ್ತದೆ.
ತನ್ನೋಳಗಿರುವ ಚೈತನ್ಯ ಸ್ಪೂರ್ತಿ ಎಲ್ಲ ಜೀವ ಜಾಲದಲ್ಲಿ ಕಂಡವಳು ಅಕ್ಕ. ಜಗತ್ತಿನಲ್ಲಿರುವ ಅನೇಕ ವಸ್ತುಗಳು, ಪಶುಪಕ್ಷಿ ಮುಂತಾದ ಜೀವಿಗಳು ತಮ್ಮಲ್ಲಿರುವ ಕೆಲವು ಗುಣವಿಶೇಷಗಳಿಂದ ಸಾರ್ಥಕತೆಯನ್ನು ಪಡೆಯುತ್ತವೆ. ಹಾಗೆಯೇ ಶ್ರೇಷ್ಠವಾದ ಮನುಷ್ಯ ಜನ್ಮದಲ್ಲಿ ಹುಟ್ಟಿ ಚೈತನ್ಯ (ಪರಮಾತ್ಮ) ಸಂಬಂಧವಾದ ಜ್ಞಾನವನ್ನು ಪಡೆಯಬೇಕಾದುದು ಅತ್ಯವಶ್ಯಕ ಎಂಬ ಭಾವವನ್ನು ಅಕ್ಕ ಹೊಂದಿದ್ದಳು. ಆದ್ದರಿಂದ ಮನುಷ್ಯ ಜನ್ಮದ ಸಾರ್ಥಕತೆ ಅಂತಹ ಜ್ಞಾನವನ್ನು ಪಡೆಯುವುದರಲ್ಲಿ ನಿಹಿತವಾಗಿದೆ ಎಂಬ ಆಶಯ ಅಕ್ಕನದಾಗಿತ್ತು.
ನಿಸರ್ಗದ ಮಡಿಲಿಗೆ ಹೋಗಿ ಪ್ರಶ್ನೆ ಮಾಡಿ ಸತ್ಯ ಬೇಧಿಸಲು ಪ್ರಯತ್ನಿಸಿದ ದಿಟ್ಟ ಮಹಿಳೆ ಅಕ್ಕಮಹಾದೇವಿ ಎನ್ನಬಹುದು. ಪಕ್ಷಿ ಪ್ರಾಣಿ ಸಸ್ಯಗಳ ಜೊತೆಗೆ ಸಂವಾದ ನಡೆಸಿದ ಎಕೈಕ ಅನುಭಾವಿ ಅಕ್ಕಮಹಾದೇವಿ. ತನ್ನೋಳಗಿರುವ ಚೈತನ್ಯ ಸ್ಪೂರ್ತಿ ಎಲ್ಲ ಜೀವ ಜಾಲದಲ್ಲಿ ಕಂಡವಳು ಅಕ್ಕ.
ಶರಣರ ಸಂಗದ ಮಹತ್ವವನ್ನು ಈ ಕೆಳಗಿನ ವಚನಗಳ ಮೂಲಕ ಅಕ್ಕ ಅಭಿವ್ಯಕ್ತಗೊಳಿಸುತ್ತಾಳೆ.

 ಆಡುವುದು ಹಾಡುವುದು ಹೇಳುವುದು ಕೇಳುವುದು ನಡೆವುದು ನುಡಿವುದು ಸರಸ ಸಮ್ಮೇಳವಾಗಿಪ್ಪುದಯ್ಯಾ ಶರಣರೊಡನೆ. ಚೆನ್ನಮಲ್ಲಿಕಾರ್ಜುನಯ್ಯಾ, ನೀ ಕೊಟ್ಟ ಆಯುಷ್ಯವುಳ್ಳನ್ನಕ್ಕರ ಲಿಂಗಸುಖಿಗಳ ಸಂಗದಲ್ಲಿ ದಿನಗಳ ಕಳೆವೆನು.

ಸಮಾಜದಲ್ಲಿ ಭವಿಗಳ ಮಧ್ಯ ಶರಣರು ಸಮಾಜೋಮುಖಿಯಾಗಿ ಲಿಂಗಸಖಿಗಳೊಂದಿಗೆ ಲಿಂಗಸಂಗದೊಳಗೆ ಬದುಕುವ ಕಲೆಯನ್ನು ಅಕ್ಕಮಹಾದೇವಿಯವರು ಈ ವಚನದಲ್ಲಿ ಈ ರೀತಿ ವಿವರಿಸಿದ್ದಾರೆ,
ನಿಸರ್ಗಪ್ರೇಮಿಯಾದ ಅಕ್ಕನವರು ಹಕ್ಕಿಗಳಂತೆ ಕಾನನದ ಪ್ರಾಣಿಗಳಂತೆ ಸ್ವಚ್ಛಂದವಾಗಿ ಯಾವ ಅರಿಷ್ಡರ್ಗಗಳ ವಾಸನೆಯಿಲ್ಲದೇ ನಿಶ್ಚಲ ಮನಸ್ಸಿನಿಂದ ಆಡುವವೋ, ಸಂತೋಷದಿಂದ ಹಾಡುವವೋ ಹಾಗೆ ನಾನು ನೀ ಕೊಟ್ಟ ಜನ್ಮವನು ಲಿಂಗಸಖಿಗಳ ಸಂಗದಲಿ ವ್ಯಯಸುವೆನು. ಈ ಮೂಲಕ ಅಂತರಂಗದ ಸೂಕ್ಷ್ಮ ಮನಸ್ಸಿನ ಚೈತನ್ಯದ ಜಾಗೃತಿಗೊಳ್ಳುತ್ತದೆ ಎಂಬ ಭಾವ ಅಕ್ಕನದು.
ಸಂಘಟನೆಯ ಬಗ್ಗೆ ಸಕಾರಾತ್ಮಕ ಚಿಂತನೆ.  ವ್ಯಕ್ತಪಡಿಸುತ್ತಾ, ಅನುಭವ ಮಂಟಪದಲಿ ಅರಿವೆಂಬ ಗುರುವನ್ನು ಅರಹುತ್ತಾ ಶರಣರ ಸಮೂಹದಲ್ಲಿ ನನ್ನನ್ನು ನಾನು ಅರಿತುಕೊಳ್ಳುವ ಅವಕಾಶವನ್ನು ದಯಪಾಲಿಸಿದ ಭಕ್ತಸಮೂಹಗಳಿಂದ ಕೇಳುವುದು, ನುಡಿಯುವದು ಹಾಗೂ  ನುಡಿದದ್ದಂತೆ ನಡೆಯುವದನ್ನು ಅರಿತು ಬಾಳುವ ತಿಳುವಳಿಕೆಯನ್ನು ನೀಡುವಂತಹ ಲಿಂಗಸಖಿಗಳ ಸಂಗದಲ್ಲಿ ನನಗೆ ಆಸಕ್ತಿದಾಯಕ ವಿಷಯಗಳ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಕ್ಕು ಆತ್ಮ ಸಂತೃಪ್ತಿಯಿಂದ ದಿನಗಳೆಯುವಂತಹ ಆಯುಷ್ಯ ನೀಡಿದ ಚೆನ್ನಮಲ್ಲಿಕಾರ್ಜುನನಿಗೆ ಧನ್ಯತಾ ಭಾವವನ್ನು ಅಕ್ಕ ವ್ಯಕ್ತಪಡಿಸುತ್ತಾಳೆ.
ಭಕ್ತಸ್ಥಲದಲ್ಲಿ ಶ್ರದ್ಧಾ ಭಕ್ತಿ ಬೆಳೆದರೆ, ಮಾಹೇಶ್ವರ  ಸ್ಥಲದಲ್ಲಿ ನಿಷ್ಠಾ ಭಕ್ತಿ ಬೆಳೆಯಬೇಕು. ಭಕ್ತನಲ್ಲಿ ಗುರುಸೇವೆ, ಕಿಂಕರತ್ವ, ಗುರುಜಂಗಮರಲ್ಲಿ ಏಕತ್ವ, ಕಾಯಕನಿಷ್ಠೆ, ದಾಸೋಹಂಭಾವಗುಣಗಳು ಬೆಳೆದರೆ ಮಹೇಶನಲ್ಲಿ ಗುರುಲಿಂಗದಲ್ಲಿ ನಿಷ್ಠೆ ಗಟ್ಟಿಗೊಳ್ಳಬೇಕು. ಅನ್ಯ ಸ್ತ್ರೀಯರ ರತಿ, ಅನ್ಯರ ನಿಂದನೆ, ಹಿಂಸೆ, ಅನ್ಯರ ದ್ರವ್ಯಾಪೇಕ್ಷೆ ಮತ್ತು ತನಗಿಂತ ಭಿನ್ನವಾಗಿ ದೇವ ನಿದ್ದಾನೆಂಬ ಭಾವ ಈ ಐದು ದುರಿತಗಳೆನ್ನುತ್ತಾರೆ.  ಇವನ್ನು ಮಾಹೇಶ್ವರ ಸ್ಥಲದಲ್ಲಿದ್ದವನು ಪರಿಹರಿಸಿ ಪರಿಶುದ್ಧನಾಗಬೇಕು ಅದಕ್ಕಾಗಿ ಶಿವಶರಣರ ಸಂಗ ಅತಿ ಮುಖ್ಯವಾದದ್ದು. ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕಾದರೆ ಅವರೊಡನೆ ಆಡಬೇಕು, ಹಾಡಬೇಕು, ಅವರ ಶುಭ ಸಂದೇಶವನ್ನು ಹೇಳಬೇಕು, ಕೇಳಬೇಕು ಅವರ ಆದರ್ಶದಂತೆ ನಡೆಯಬೇಕು. ನಡೆದಂತೆ ನುಡಿಯಬೇಕು, ಹೀಗಾದರೆ ಮಾತ್ರ ಶರಣರೊಡನೆ ಸರಸ ಸಮ್ಮೇಲನವಾಗುವದು. ಚೆನ್ನಮಲ್ಲಿಕಾರ್ಜುನ ದೇವಾ, ನೀ  ಕರುಣಿಸಿದ ಆಯುಷ್ಯ ಇರುವ ತನಕ ಲಿಂಗಾಂಗಸಂಗಿಗಳ ಸಂಗದಲ್ಲಿ ದಿನ ಕಳೆದು ಪಾವನಳಾದೆನು. ಅಂದರೆ ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎಂಬ ಭಾವ ಇದರಲ್ಲಿ ಅಡಗಿದೆ.  ನೀವೂ ಇದನ್ನೇ ಅನುಸರಿಸಿರೆಂದು ಅಕ್ಕನ ಅಭಿಮತ


ಡಾ.ದಾನಮ್ಮ ಝಳಕಿ

4 thoughts on “ಲಿಂಗಸುಖಿಗಳ ಸಂಗದಲ್ಲಿ ದಿನಗಳ ಕಳೆವೆನು.ಡಾ.ದಾನಮ್ಮ ಝಳಕಿಯವರ ಬರಹ

  1. ಅರ್ಥಪೂರ್ಣವಾದ ಲೇಖನ ಮೇಡಂ ಧನ್ಯವಾದಗಳು

Leave a Reply

Back To Top