ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ಮುರಿದ ವೀಣೆಯ ತಂತಿಗಳಾಗಿವೆ ಮೊಗದ ಸುಕ್ಕುಗಳು ಈಗೀಗ
ಬಣ್ಣ ಮಾಸಿದ ಚಿಂದಿಗಳಾಗಿವೆ ಕೆಂಬಣ್ಣ ಕೆನ್ನೆಗಳು ಈಗೀಗ
ಮುಂಗುರುಳು ಮುತ್ತಿಟ್ಟ ಹಣೆ ಸೊರಗಿ ಮುದುರಿತೇಕೆ ಹೇಳು
ಬತ್ತಿ ಒಣಗಿದ ಕುಳಿಗಳಾಗಿವೆ ಹೊಳೆವ ಕಣ್ಣುಗಳು ಈಗೀಗ
ಕಪ್ಪನೆಯ ಕೇಶರಾಶಿ ಚದುರಿದ ಬಿಳಿಮುಗಿಲು ಹೊದಿಕೆ ಆಗಿದೆ
ಹೀರಿ ಹಿಂಡಿದ ಗಿಂಡಿಗಳಾಗಿವೆ ಜೇನಿನ ತುಟಿಗಳು ಈಗೀಗ
ಬದುಕಿನ ಬವಣೆಗಳ ನೇಯ್ದ ದೇಹಕೆ ಮುಪ್ಪಡರಿದೆ ಬಳಲಿ
ಗಟ್ಟಿ ಹಿಮದ ಬಂಡೆಗಳಾಗಿವೆ ಸೋತ ಕಾಲುಗಳು ಈಗೀಗ
ಸಿಹಿಯ ಸವಿದ ಬೇಗಂ ಳ ಮನವಿಂದು ರುಚಿಯ ಅರಿಯದಾಗಿದೆ
ಏನೋ ಏಕೋ ಕ್ಷಣಗಳಾಗಿವೆ ಕಂತುವ ದಿನಗಳು ಈಗೀಗ..
ಹಮೀದಾ ಬೇಗಂ ದೇಸಾಯಿ
ಸುಂದರವಾದ ಕವಿತೆ ಮನಮುಟ್ಟಿ ದೆ ಭಾವ
ಧನ್ಯವಾದಗಳು ಮೆಚ್ಚುಗೆಗೆ ಮೇಡಂ.
ಹಮೀದಾ ಬೇಗಂ. ಸಂಕೇಶ್ವರ.
ತುಂಬ ಸರಳ ಪದಗಳಲ್ಲಿ ಮುಪ್ಪಿನ ಅವಸ್ಥೆಯ ವರ್ಣನೆ ಮಾಡಿದ್ದೀರಿ. ಇಷ್ಟವಾಯಿತು.
ಸ್ಪಂದನೆಗೆ ಧನ್ಯವಾದಗಳು ತಮಗೆ.
ಹಮೀದಾ ಬೇಗಂ. ಸಂಕೇಶ್ವರ.