ಗಝಲ್
ಎ. ಹೇಮಗಂಗಾ
ನನ್ನ ತೊರೆದು ಹೋಗುವುದೇ ಹಿತವೆಂದಾದರೆ ಹೇಳಿ ಹೋಗು ಕಾರಣ
ನನ್ನ ಮರೆತು ಬಾಳುವುದೇ ಸುಖವೆಂದಾದರೆ ಹೇಳಿ ಹೋಗು ಕಾರಣ
‘ನಿನ್ನ ಹೊರತು ಬೇರಾರೂ ಬೇಕಿಲ್ಲ’ವೆಂದೇ ಈ ತನಕ ಕನವರಿಸುತ್ತಿದ್ದೆ
ನನ್ನ ಅಸೀಮ ಒಲವೇ ಈಗ ಬೇಡವೆಂದಾದರೆ ಹೇಳಿ ಹೋಗು ಕಾರಣ
ಕಂಡ ಕನಸುಗಳಿಗೆ ರಂಗು ಬಳಿದು ರೆಕ್ಕೆ ಮೂಡಿಸಿದವನು ನೀನು
ನನ್ನ ಸಾಂಗತ್ಯವೇ ಇಷ್ಟವಿಲ್ಲವೆಂದಾದರೆ ಹೇಳಿ ಹೋಗು ಕಾರಣ
ದಿಕ್ಕು ಬದಲಿಸಿದ ನಿನ್ನ ನಿಗೂಢ ನಡೆ ಊಸರವಳ್ಳಿಯನ್ನು ನೆನಪಿಸಿದೆ
ನನ್ನ ಸಂಗವೇ ಬೇಡದ ಹೊರೆಯೆಂದಾದರೆ ಹೇಳಿ ಹೋಗು ಕಾರಣ
‘ ಹೇಮ’ ಳ ಪ್ರೀತಿ ನಶೆಯೇ ಸಾಕೆಂದು ಮಧುಶಾಲೆಗೆ ಬೆನ್ನು ತಿರುವಿದ್ದೆ
ನನ್ನ ಶಾಶ್ವತ ವಿದಾಯವೇ ಹೊಸಬದುಕೆಂದಾದರೆ ಹೇಳಿ ಹೋಗು ಕಾರಣ
*******