ಕಾವ್ಯ ಸಂಗಾತಿ
ಹನಿಬಿಂದು
ಗಜಲ್
ಮತ್ತೆ ಬಂದೆಯಾ ಬಾಳಿಗೆ ಬಂಗಾರದ ಬೆಳೆಯ ಬಿತ್ತಿದಂತೆ
ಸುತ್ತ ಪ್ರೇಮದ ಕಾವಲು ಕಾಯುತ್ತಾ ಪೊರೆಯ ಸುತ್ತಿದಂತೆ
ಕತ್ತಲಾಗಲು ಬಿಡದೆ ಹಗಲಿನಲೆ ಸೂರ್ಯ ಧರೆಯ ಬಳಿ
ಮೆತ್ತಬೇಕಿನ್ನು ಮನಕೆ ಹೊಸ ಗಾಳಿ ಸಿರಿಯ ತಂದಂತೆ
ಭತ್ತ ಕೊಟ್ಟ ಅಕ್ಕಿಯ ರುಚಿಯ ತಿಂದ ದೇಹದೊಳಗೆ
ಮುತ್ತ ನೀಡಿ ಸಾಕಿ ಸಲಹೋ ಪ್ರೀತಿಯ ತಂದಂತೆ
ನತ್ತ ಮೇಲಿನ ಧೂಳನ್ನು ಕೂಡ ಗುರುತಿಸಿ ತೆಗೆದ ಹಾಗೆ
ನೆತ್ತರ ಕೆಂಪು ಹರಿಸದೆ ಯುದ್ಧವನು ವಿನಯ ಗೆದ್ದಂತೆ
ಬತ್ತಳಿಕೆಯಲ್ಲಿ ಅದೆಷ್ಟು ಮಧುರ ಮದನ ಬಾಣಗಳಿವೆಯೋ
ಬೆತ್ತಲಾಗಿ ಬಿಟ್ಟಿರುವೆ ಮನದೊಳಗೆ ನಿನ್ನಯ ಭಾವದಂತೆ
ಸುತ್ತಿ ಸುಳಿದು ಹತ್ತಿರ ಸರ್ವ ಕಾಲದಲು ಜೊತೆ ಜೊತೆಗೆ
ಮೆತ್ತಿ ಕೊಂಡಿರುವೆ ನಿನ್ನದೇ ಯೋಚನೆ ಹೃದಯ ಹೇಳಿದಂತೆ
ನೆತ್ತಿಯಲಿ ಅದೇನು ಬರೆದಿಹನೋ ಆ ಚತುರ್ಮುಖ ಬ್ರಹ್ಮ
ತುತ್ತಿನಲಿ ಪ್ರೇಮದ ಹನಿಯೂ ನಿನ್ನದೇ ರವಿಯ ಕಿರಣದಂತೆ
——————————————–
ಹನಿಬಿಂದು
❤