ಡಾ ಅನ್ನಪೂರ್ಣ ಹಿರೇಮಠ ಕಂಬನಿಯ ಕೊಳ

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಕಂಬನಿಯ ಕೊಳ

ಹನಿಯೊಡೆಯಲನಿಯಾಗಿ
ನಿಂತ ನೋವ ತುಂಬಿದ
ಕಣ್ಣೋಟವದು, ಇರಿಯುತಿದೆ
ಎದೆಗೆ ಬೆಂದೊಡಲ ಕರೆಗೆ
ದುಃಖ ನುಂಗತ ಸಂಕಷ್ಟ ಬಚ್ಚಿಡುತ
ತುಟಿಗಚ್ಚಿ ಮೌನ ಮಡುಗಟ್ಟಿದೆ

ಗಾಳಿ ಸ್ಪರ್ಶಕ್ಕೆ ಹನಿ ಉದುರಿಸೋ
ತವಕದಲಿ ಪಕ್ವಗೊಂಡ
ಮೂಡದಂತೆ ಪ್ರಸವ ವೇದನೆಯಲಿ
ಬಳಲುತಿಹ ತುಂಬು ಬಸುರಿ
ಉಸಿರು ಗಟ್ಟಿಹಿಡಿದು ಉಮ್ಮಳಿಸುವ
ವೇದನೆಯ ತಾಪವ
ತಬ್ಬಿಕೊಂಡು ತಡೆಹಿಡಿದು
ಹಗುರಾಗುವ ಕ್ಷಣವ
ಎದುರು ನೋಡುತಿರುವಂತೆ

ಹುದುಗಿಟ್ಟ ಭಾವಗಳು
ಕೊರೆ ಕೊರೆದು ಭೋಗ೯ರೆವ
ಶರಧಿಯ ತೆರೆಗಳಪ್ಪಳಿಸುವ
ತೆರೆದಲಿ ಒಡಲ ಬಗೆವ ಕರುಳ
ಪ್ರೀತಿ ಕಂಗೆಡಿಸಿ ಹಿಂಡುವುದನು
ಬಚ್ಚಿಟ್ಟ ತೆರೆದಲಿದೆ

ನೂಪುರದ ಪ್ರೇಮದಲೆಗಳು
ನವಿರಾದ ನಲುಮೆ ನುಂಗಿ
ಶಿವ ವಿಷ ಕಂಠದಲಿ ಹಿಡಿದಿಟ್ಟ
ತೆರೆದಲಿ ತುಂಬಿ ನಿಂತಿವೆ
ಹೊಳೆವ ಕಂಗಳು ಕಂಗೆಟ್ಟು
ಹೇಳಲರಿಯದ ಮಾತುಗಳ
ಅದುಮಿಟ್ಟ ಮೂಕ ಮೌನದೆ

ವಿರಹದುರಿಯು ಹೃದಯದಲಿ
ನಿಗಿನಿಗಿಪ ಕೆಂಡದುಂಡಿಗಳ
ಹುಟ್ಟು ಹಾಕಿರಲು ಸುಡುವ
ಬೆಂಕಿ ಬೇಗೆ ಸಹಿಸುತಲಿಹ
ಭಾವ ತೋರುತಿದ ತುಳುಕುತಿಹ
ನೋಟದ ಬಿತ್ತಿಯಲಿ

ಸವಿ ನೆನಪುಗಳು ಕಹಿಯಾಗಿ
ಕಂಗೆಡಿಸಿ ಸುಳಿ ಸುಳಿದು
ಚಿತ್ತ ಕದಡಿ ಬೆತ್ತಲಾಗಿಸಿ
ಅಂತರಂಗದ ಅಳಲನು
ತಡೆ ಹಿಡಿದ ತನು
ದಿಕ್ಕು ಕಾಣದಾಗಿ ತುಂಡಾಗುವ
ಭಯದಲಿ ಬೆಚ್ಚಿ ಬಿದ್ದಂತಿದೆ
ನೊಂದ ಜೀವ ಕುಸುಮ

ಬಯಲ ಬಾಂದಳದೆ
ಕತ್ತಲಾವರಿಸಿ ನೋಡಿದಲ್ಲೆಲ್ಲಾ
ಕಾರ್ಮೋಡದ ಛಾಯೆ
ದಿಕ್ಕುಗಾನದೆ ಪಾರಾಗುವ
ದಾರಿ ತೋರದೆ
ಪೇಚಿಗೆ ಸಿಲುಕಿದಂತಿದೆ
ಮುಂದೇನೆಂದರಿಯದೆ ಬಾಗಿಲೆಲ್ಲ
ಮುಚ್ಚಿ ನಡುಗಿಸುತ್ತಿದ್ದಂತೆ


ಡಾ ಅನ್ನಪೂರ್ಣ ಹಿರೇಮಠ

One thought on “ಡಾ ಅನ್ನಪೂರ್ಣ ಹಿರೇಮಠ ಕಂಬನಿಯ ಕೊಳ

Leave a Reply

Back To Top