ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ಗೆಳೆಯ ನಾನಿರುವ ನರಕ ಲೋಕದ ಬಾಗಿಲು ತೆರೆದಿದೆ ಬಾ ಒಳಗೆ
ಭೂಲೋಕದ ಸಕಲ ವ್ಯವಹಾರವಗಳ ಅಲ್ಲೇ ತೊರೆದು ಬಾ ಕೆಳಗೆ
ಸ್ವರ್ಗವೇಕೋ ಹಿಡಿಸಲಿಲ್ಲ ನನಗೆ ಕೈ ಕುಲುಕೆ ಜನರೇ ಇರಲಿಲ್ಲ ಅಲ್ಲಿ
ಹಿಂದಿರುಗಲು ನೋಡಿದೆ ಬೇಡಿದೆ ನಾ ಹೋಗಲಾಗದೆಂದರು ಇಳೆಗೆ
ಪಾಪಿಗಳೋ ಪಾಪಿಷ್ಠರೋ! ತುಂಬಿ ತುಳುಕುವ ಭಾರತದಂತಿದೆ ಇಲ್ಲಿ
ಎಲ್ಲರಿಗೆ ಹಸ್ತಲಾಘವ ನೀಡುತ್ತಲೇ ಇರುವೆ ಬಿಡುವಿಲ್ಲ ಒಂದು ಗಳಿಗೆ
ಎಲ್ಲ ತೆರನಾದ ಶಿಕ್ಷೆಯಲೂ ಬಿಸಿಯುಂಟು ಮತ್ತು ಬೆಂಕಿಯುಂಟು ಇಲ್ಲಿ
ವಿಶೇಷ ಎಂದರೆ ನನ್ನ ಮರಣದ ಕಾರಣವೇ ತಡೆಯಲಾಗದಂತ ಚಳಿಗೆ
ತಪಾಸಣೆ ಪರಿವೀಕ್ಷಣೆ ಎಂಬ ಯಾವ ಗೊಡವೆಯೇ ಇಲ್ಲ ಪ್ರವೇಶಕೆ ಇಲ್ಲಿ
ಉಳುಮೆ ಗಿಳಿಮೆ ಯಾವುದೊಂದು ವ್ಯವಸಾಯ ಮಾಡಬೇಕಿಲ್ಲ ಬೆಳೆಗೆ
ನಾಳೆ ಶಿಕ್ಷೆಯ ಅನುಭವಿಸಲು ಸಾಕಾಗುವಷ್ಟು ನೀಡುವರು ಆಹಾರ ಇಂದು
ಇದಕೆ ಬೇಕಾಗುವಷ್ಟೇ ದವಸ ಧಾನ್ಯ ಇರಿಸಿದೆ ಇಲ್ಲಿನ ದಾಸ್ತಾನು ಮಳಿಗೆ
ಇಳಿಮುಖ ಎಂಬುವ ಪದವೇ ಅರಿಯರು ಇಲ್ಲಿ ವಾಸಿಸುವ ಪಾಪಿ ಜನರು
ಪ್ರತಿಕ್ಷಣ ಪ್ರತಿನಿಮಿಷ ಪ್ರತಿವರ್ಷ ಈ ಲೋಕ ಗಳಿಸಿದೆ ಅದ್ಬುತ ಏಳಿಗೆ
ಕಾಮುಕರಿಲ್ಲ ಸ್ತ್ರೀ ಲೋಲುಪರಿಲ್ಲ ಸ್ವರ್ಗದ ರಾಜ ಇಂದ್ರನಂತೆ ಈ ಲೋಕದೆ
ಕೃಷ್ಣಾ! ಹಸಿವೇ ಇಲ್ಲದೆ ಯಾರಿಗೇಕೆ ಬೇಕು ಹೇಳು ನೀ ಹೆಗಲ ಜೋಳಿಗೆ
ಬಾಗೇಪಲ್ಲಿ