ಕಾವ್ಯಯಾನ

ವಿಧಾಯ ಹೇಳುತ್ತಿದ್ದೇವೆ

green and brown graffiti art

ದೇವವರ್ಮ ಮಾಕೊಂಡ(ದೇವು)

ಮಧುರ ಸ್ಪರ್ಷವಿತ್ತ
ನೆನಪುಗಳು ಮುಳುಗುತ್ತಿವೆ
ಕಣ್ಣುಗಳ ಮುಂದೆ ಹಾದು ಹೋಗುತ್ತಿವೆ
ದಿನ ದಿನ ಕಳೆದ ಘಟನೆಗಳು
ಭಯವಿದೆ ನನಗೀಗ
ನೂರಾರು ವರುಷಗಳಿಂದ ಪಕ್ಕೆಲುಬುಗಳಲಿ
ಬಚ್ಚಿಟ್ಟಿದ್ದ ನೆನಪುಗಳು ಅಭದ್ರಗೊಳ್ಳುತ್ತಿವೆ ಎಂದು
ಹೇರಳವಾಗಿರುವ ಸಿಡಿಲು ಮಳೆ ಹನಿಗಳಿಂದ

ನಾನು ಏಕಾಂಗಿಯಾಗಿದ್ದೇನೆ
ಸ್ವರ್ಗದ ಹಾದೀಲಿ
ದುಃಖಗಳ ಗುರುತ್ವಾಕರ್ಷಣೆಯ ತುದಿಗೆ ಒರಗಿಕೊಂಡು

ನಾನೀಗ
ಕಳೆದು ಹೋದ ಜೋತಿರ್ವರ್ಷಗಳ
ಮೆಲಕು ಹಾಕುತ್ತ ನಿಂತಿರುವೆ
ಲಿಖಿತ ಡೈರಿಗಳು
ಶೀರ್ಷಿಕೆ ರಹಿತ ಪದ್ಯಗಳು
ರಾತ್ರಿ ಮಂಡಿಸಿದ ಕನಸುಗಳು ಕಳೆದುಕೊಂಡು
ಬರಿ
ಅರೆಬರೆ ತಿದ್ದಿದ ನಂಬಿಕೆ ಹದೀಸ್ ಪುರಾಣಗಳ
ನಡುವೆ ನಿಂತಿದ್ದೇನೆ

ನೋಡಿ
ವರ್ಷಕ್ಕೊಂದೆರಡು ಸಲ
ತ್ರಿವರ್ಣ ಧ್ವಜದ ಕೆಳಗೆ
ಮಸುಕಾದ ಹೆಜ್ಜೆಗುರುತುಗಳು
ಉಸಿರು ಕಟ್ಟಿದ ಗಂಟಲಿಂದ ಬರುವ
ಶುಭಾಶಯ ಸಹಾನುಭೂತಿಗಳು
ಮಿನುಗುತ್ತಿವೆ
ಮರುದಿನ ಮತ್ತೆ
ಅಸಮ ಉಸಿರು
ಎದೆಬಡಿತ !

ಬನ್ನಿ
ನೋಡಬನ್ನಿ
ನಾವು ಎಷ್ಟೊಂದು ನಿಧಾನವಾಗಿ
ಎಷ್ಟೊಂದು ಅಭಾರವಾಗಿ ಸಾಯುತ್ತಿದ್ದೇವೆ
ಗಲ್ಲಿಯಲಿ ಕನಸು ಕಂಡ ಆತ್ಮಗಳು
ಷಹರನಲಿ ಅಳಿಯುತ್ತಿವೆ
ಭಯ ಬೆನ್ನುಮೂಳೆ ಸುತ್ತುವಾಗ
ಖುಷಿಯನ್ನು ರಕ್ತನಾಳ ಸುಡುತ್ತಿದೆ
ಹೀಗೆ…
ದಿನೇ ದಿನೆ ವಿಧಾಯ ಹೇಳುತ್ತಿದ್ದೇವೆ ನಾವು
ನೋಡಬನ್ನಿ ನೀವು
——–

3 thoughts on “ಕಾವ್ಯಯಾನ

  1. ಚೆನ್ನಾಗಿದೆ. ಅದೇ ಭಯದ ನೆರಳು… ಹೇಗೆ ವಿದಾಯ ಹೇಳುವುದು…

  2. ಭಯದ ಛಾಪು ಹೀಗೇನೆ. ಅದು ಯಾವ ಯುಗ ಧರ್ಮ ಗಡಿ ಬಿಟ್ಟು ನಿಂತಿಲ್ಲ. ಎಲ್ಲ ಕಡೆ ಆವರಿಸಿ ಬರುತ್ತದೆ. ಅದನ್ನು ಮೆಟ್ಟಿ ಬದುಕುವ ಭರವಸೆ ಮೂಡಬೇಕಿದೆ. ಖುಷಿಯನ್ನು ವಿಧಾಯ ಮಾಡುವ ಬದಲು ಖುಷಿ ಖುಷಿಯಾಗಿ ಭಯದ ವಿಧಾಯ ಮಾಡೋಣ
    ಚಂದದ ಪದ್ಯ.

Leave a Reply

Back To Top