ಇಂದಿರಾ ಮೋಟೆಬೆನ್ನೂರ ಧನ್ಯವಾದ…

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಧನ್ಯವಾದ…

ಕಣ್ಣ ರೆಪ್ಪೆಯಡಿಯಲ್ಲಿ
ಪೊರೆಯುತ..
ಮಣ್ಣ ಹಾದಿಗೆ ತಳ್ಳಿದ
ನಿನಗೆ ಧನ್ಯವಾದ….

ಹೂವ ಹಾಸಿನಲಿ
ನಡೆಸಿ ಮುಳ್ಳ ಬೇಲಿಯಲಿ
ಎಸೆದು ನಡೆದ
ನಿನಗೆ ಧನ್ಯವಾದ…

ಸ್ನೇಹ ಮುತ್ತ ಮಳೆ ಸುರಿಸಿ
ಸುತ್ತ ಕತ್ತಲು ಹರಿಸಿ
ದೂರ ಸರಿಸಿದ
ನಿನಗೆ ಧನ್ಯವಾದ…..

ಪ್ರೀತಿ ಹೊಳೆಯಲಿ
ಮೀಯಿಸಿ ತಾಪ ಕೂಪಕೆ
ನೂಕಿ ನಡೆದ
ನಿನಗೆ ಧನ್ಯವಾದ….

ನುಡಿಗವಳ ಸಿಹಿನುಡಿಯ
ರಸಗವಳ ಉಣಿಸಿ
ಮೌನದಿ ದಂಡಿಸುವ
ನಿನಗೆ ಧನ್ಯವಾದ….

ಮಲ್ಲಿಗೆ ಮಗು ಮನಕೆ
ತುಸು ನಗು ನೀಡದೆ
ಮುನಿಸು ತೋರುವ
ನಿನಗೆ ಧನ್ಯವಾದ….

ಅಪಮಾನ ಅಪನಿಂದೆ
ಕಾಣಿಕೆಯ ನೀಡಿ
ಕನಸು ಕರಗಿಸಿದ
ನಿನಗೆ ಧನ್ಯವಾದ….

ಭಾವದುಯ್ಶಾಲೆಯಲಿ
ತೂಗಿ ಪ್ರೀತಿ ಹಣತೆ ಹಚ್ಚಿ
ಕಣ್ಮುಚ್ಚಿ ತೊರೆದ
ನಿನಗೆ ಧನ್ಯವಾದ….


ಇಂದಿರಾ ಮೋಟೆಬೆನ್ನೂರ.

Leave a Reply

Back To Top