ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್
ಕಣ್ಣ ಮುಂದೆ ಬಂದ ಅವನ ರೂಪ ತಿಳಿಯಲಿಲ್ಲ
ಸಾಂಗತ್ಯದಿ ಕೊಟ್ಟ ಮೌನ ಭಾಷೆ ಅರಿಯಲಿಲ್ಲ
ಪ್ರೀತಿ ಪಡೆಯಲು ಜಂಗಮನ ಜೊತೆ ಅಲೆದೆ ಕಾಡಲಿ
ಇರುಳು ಕುಡಿಸಿದ ಒಲವರಸ ಅಮಲು ಇಳಿಯಲಿಲ್ಲ
ಸಂಜೆ ಬರುವೆನೆಂದು ಮುತ್ತನು ನೀಡಿ ಮರೆಯಾದ
ದೀಪ ಬೆಳಗಿ ಕುಳಿತೆ ಸಮಯ ಮುಳ್ಳು ಸರಿಯಲಿಲ್ಲ
ಯಮುನೆಯ ತಟದಿ ಅಲೆಗಳ ಎಣಿಸುತ ಮಲಗಿದೆ ನಾ
ಹೃದಯ ಸೆಳೆಯುವ ಮೋಹದ ಮುರಳಿಯು ನುಡಿಯಲಿಲ್ಲ
ಒಲುಮೆಯ ಹನಿ ನದಿಯಾಗಿ ಕಡಲ ಸೇರ ಬಯಸಿತು
ಪ್ರಣಯ ಕೊಳದಿ ಜೊತೆಯಾಗಿ ಪ್ರಭೆಯು ನಲಿಯಲಿಲ್ಲ
ಪ್ರಭಾವತಿ ಎಸ್ ದೇಸಾಯಿ