ಕಾವ್ಯಸಂಗಾತಿ
ಲೀಲಾಕುಮಾರಿ ತೊಡಿಕಾನ
ಸಮಯ ಕಾಯುವುದಿಲ್ಲ
ನನಗೀಗೀಗ ತುಸು ಹೆಚ್ಚೇ ಕೋಪ
ಈ ಗಡಿಯಾರದ ಮೇಲೆ
ಮುಖ ನೋಡಲೇ ಬಾರದೆಂದುಕೊಂಡರೂ..
ವಿಧಿಯಿಲ್ಲದೆ ಗಳಿಗೆ ಗಳಿಗೆಗೂ
ನಾನೇ ಇಣುಕುತ್ತೇನೆ ಅದರೆಡೆಗೆ
ದಿನಚರಿಯ ಒತ್ತಡಕ್ಕೆ ಮಣಿದು!
ಕ್ಷಣ ಕ್ಷಣಗಳನ್ನೂ ಕೊಲ್ಲುತ್ತಾ
ಸಾಗುವ ಮುಳ್ಳುಗಳು ನನ್ನನ್ನೇ
ಚುಚ್ಚಿ ಘಾಸಿಗೊಳಿಸಿದಂತೆ
ಪರದಾಡುವ ನನಗೆ ಮುಳ್ಳುಗಳನ್ನು
ಹಿಂದಕ್ಕೆ ತಳ್ಳಿಬಿಡುವಷ್ಟು ಸಿಟ್ಟು;
ಅವುಗಳೋ ಕೈಗೆಟುಕದೆ ಜಿಗಿಯುತ್ತವೆ
ಗಾಜಿನ ಸುಭದ್ರತೆಯೊಳಗೆ..
ಮರುಕ್ಷಣ ಸಮಯವನ್ನೇ ಹಿಡಿಯಲೆತ್ನಿಸಿದ
ಹುಚ್ಚು ಸಾಹಸಕ್ಕೆ ಬೆರಗಾಗಿ
ನಿಟ್ಟುಸಿರು ಬಿಡುತ್ತೇನೆ..
ನಿಲ್ಲೆಂದಾಗ ಓಡುವ, ಓಡೆಂದಾಗ
ನಿತ್ತಂತೆ ಭ್ರಮೆ ಹುಟ್ಟಿಸುವ ಇದರೊಂದಿಗೆ
ಮುಗಿಯದೆ ಗುದ್ದಾಟ ನನ್ನದು!
ನಾನೋ ಹಠಮಾರಿ
ಅದೊಮ್ಮೆ ತಿರುಗುವ ಗಡಿಯಾರದ ಮುಳ್ಳುಗಳ ನಿಲ್ಲಿಸಿಯೇ ಬಿಟ್ಟೆ!
ಕರ್ತವ್ಯ ನಿರತ ಕಾಲಕ್ಕೆ ಯಾರ ಹಂಗು?
ಬೆಳಗು ಬೈಗುಗಳು ಯಥಾಪ್ರಕಾರವಾದ ಪರಿಗೆ
ವಿಸ್ಮಯದಿಂದಲೇ ಋಣಿಯಾಗಿದ್ದೇನೆ
ಸರ್ವಸ್ವತಂತ್ರ ಕಾಲ ಬಂಧಿಯಾಗುವುದುಂಟೇ
ಗಡಿಯಾರದೊಳಗೆ?
ಬದುಕಿನ ಗಡಿಯಾರದೊಳಗೆ
ಚಲಿಸುವ ಕಾಣದ ಮುಳ್ಳು
ಚುಚ್ಚಬಹುದು, ನಿಲ್ಲಲೂಬಹುದು
ಎಂಬುದಷ್ಟೇ ಸತ್ಯ!!
ಲೀಲಾಕುಮಾರಿ ತೊಡಿಕಾನ
`
ಚೆನ್ನಾಗಿದೆ ಸಮಯದ ಪರಿವೆಯ ಕವಿತೆ