ಜ್ಯೋತಿ , ಡಿ . ಬೊಮ್ಮಾಲೇಖನ ಮನಸ್ಸೆ ದೇವಾಲಯ..

ಆರೋಗ್ಯ ಸಂಗಾತಿ

ಜ್ಯೋತಿ , ಡಿ . ಬೊಮ್ಮಾ

ಮನಸ್ಸೆ ದೇವಾಲಯ..

ಸ್ವಸ್ಥ ಮನಸ್ಸು ಸ್ವಸ್ಥ ದೇಹಕ್ಕೆ ನಾಂದಿ.ಮನಸ್ಸು ಕೂಡ ದೇಹದ ಇತರ ಅಂಗಗಳಂತೆ ಒಂದು ಪ್ರಮುಖ
 ಅಂಗ ಎಂಬ ಭಾವನೆ ನಮಗೆ ಇರದು. ಎಕೆಂದರೆ ದೇಹದ ಇತರ ಅಂಗಗಳಿಗೆ ಭಾದಿಸುವ ನೋವಿನ ಅರಿವು ಮನಸ್ಸಿಗೆ ಭಾಧಿಸಿದಾಗಲೂ ಅದನ್ನು ನಿರ್ಲಕ್ಷಿಸುವದೆ ಹೆಚ್ಚು. ಕವನ, ಶಾಯಿರಿಗಳಲ್ಲಿ ಮನಸ್ಸಿಗೆ ಪ್ರಾಮುಖ್ಯತೆ ಕೊಟ್ಟಷ್ಟು ನಿಜ ಜೀವನದಲ್ಲಿ ಅದರ ಬಗ್ಗೆ ಗಮನಹರಿಸಿದ್ದು ಕಡಿಮೆಯೆ.   ಮನಸ್ಸು ಒಡೆಯುವದನ್ನು ಕಾವ್ಯಾತ್ಮಕ ವಾಗಿ ಬಣ್ಣಿಸಿದಷ್ಟು ನಿಜವಾಗಿ ಒಡೆದಾಗ ಅದರ ತೀವ್ರತೆ ಅರಿವಾಗದು. ಭಾದೆಗೊಳಗಾದ ಮನಸ್ಸು ಸ್ವಲ್ಪ ಸಮಯದ ನಂತರ ಸರಿಹೋಗುವದು ಎಂಬ ಧೋರಣೆ. ಸರಿ ಹೋಗಬಹುದು ಕೂಡ. ಆದರೆ ಪರಿಣಾಮ ದೇಹದ ಇತರ ಅಂಗಗಳ ಮೇಲೆ ತೊರಿಸದೆ ಇರದು.

ಮನಸ್ಸು ಅಹ್ಲಾದವಾಗಿದ್ದರೆ ದೇಹವೂ ಅಹ್ಲಾದಕರವಾಗಿಯೇ ಇರುತ್ತದೆ. ಕೋಪ , ಸಿಟ್ಟು , ಖುಷಿ , ಅಳು , ಸಂತೋಷ, ದುಃಖ ಈ ಎಲ್ಲಾ ಭಾವಗಳು ಮನಸ್ಸಿನಿಂದಲೇ ಅನಾವರಣಗೊಳ್ಳುತ್ತವೆ. ಆದರೆ ಈ ಮನಸ್ಸು ಎಂಬ ಅಂಗವನ್ನು ನಾವೇಷ್ಟು ಅರಿತಿದ್ದೆವೆ ಎಂಬುದು ಯಕ್ಷ ಪ್ರಶ್ನೆ. ದೇಹದ ಇತರ ಅಂಗಗಳಿಗೆ ತೊಂದರೆ ಭಾದಿಸಿದಾಗ ತಕ್ಷಣ ವೈದ್ಯರಲ್ಲಿ ದೌಡಾಯಿಸುವ ನಾವು ಮನಸ್ಸು ಕೆಟ್ಟಾಗ ಯಾವ ವೈದ್ಯರನ್ನು ನೆನೆಯುವದಿಲ್ಲ.ಏಕೆ..!

ಖಿನ್ನತೆ , ಆತಂಕ ,ಒತ್ತಡಗಳ ಪರಿಣಾಮ ದೇಹದ ಮೇಲಾಗುವದು ಮನಸ್ಸು ಹದಗೆಟ್ಟಾಗ.ಅಷ್ಟೇ ಏಕೆ , ನಮ್ಮ ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿ ಕಾಡುವ ಮೈಕೈ ನೋವು , ತಲೆ ನೋವು , ಸೊಂಟನೋವು ಇವೆಲ್ಲ ಮಾನಸಿಕ ಒತ್ತಡದಿಂದ ಮನಸ್ಸಿನಿಂದ ಉದ್ಭವಿಸುವ ರೋಗಗಳೆ.ಇವೆಲ್ಲ ದಿನನಿತ್ಯದ ಗೋಳು ಎಂದು ಅವುಗಳೋಂದಿಗೆ ಬದುಕುವದನ್ನು ಕಲಿಯುತ್ತೆವೆಯೇ ಹೊರತು ಅವುಗಳಿಗೆ ಮೂಲ ಕಾರಣ ಹುಡುಕುವ ಗೋಜಿಗೆ ಹೋಗುವದಿಲ್ಲ.ಇಲ್ಲವೆ ಯಾವದೇ ದೇವರ ಅಥವಾ ದೆವ್ವದ ಕಾಟ ಎಂದು ತಿಳಿದ ಪೂಜೆ ತಂತ್ರ ಮಾಡಿಕೊಂಡು ಮರೆಯಬಹುದು.ಸತತವಾಗಿ ಕಾಡುವ ಆಯಾಸ , ಉಬ್ಬಸ , ಹೃದಯ ಬಡಿತದ ಏರು ಪೇರಿಗೆ ನೇರವಾಗಿ ಹೃದ್ರೋಗ ತಜ್ಞ ರಲ್ಲಿ ಹೋಗುತ್ತೆವೆ.ತಲೆ ನೋವಾದರೆ ಮತ್ತಾರೋ ವೈದ್ಯರಲ್ಲಿ ಹೋಗುತ್ತೆವೆ.ಅಲ್ಲಿ ನೂರೆಂಟು ಟೆಷ್ಟು ಅದು ಇದು ಮಾಡಿಸಿ ದಣಿಸಿದರೂ ಕಡಿಮೆಯಾಗದೆ ಇದ್ದಾಗ ಮಾನಸಿಕ ರೋಗ ತಜ್ಞರ ನೆನಪಾಗುತ್ತದೆ.

ಪಾಶ್ಚಾತ್ಯ ದೇಶಗಳಲ್ಲಿ ಯಾವದೇ ರೋಗಕ್ಕೆ ಚಿಕಿತ್ಸೆ ಪಡೆಯುವ ಮೊದಲು ಮಾನಸಿಕ ರೋಗತಜ್ಞರನ್ನು ಭೆಟಿಯಾಗುತ್ತಾರಂತೆ.ಅವರೊಂದಿಗೆ ಸಮಾಲೋಚಿಸಿದ ನಂತರವೇ ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧರಿಸುತ್ತಾರೆ.ಇದು ತುಂಬಾ ಅವಶ್ಯ ಕೂಡ.

ಪ್ರತಿಯೊಬ್ಬ ವೈದ್ಯರು ತಮ್ಮಲ್ಲಿ ಬರುವ ರೋಗಿಗಳ ರೋಗಕ್ಕಿಂತ ಅವರ ಮಾನಸಿಕ ಸ್ಥಿತಿ ಅರ್ಥ ಮಾಡಿಕೊಳ್ಳುವದು ಬಹಳ ಅವಶ್ಯಕ. ಇಲ್ಲವೇ ವೈದ್ಯರೆ ಖುದ್ದು ರೋಗಿಗಳನ್ನು ಮಾನಸಿಕ ರೋಗ ತಜ್ಞ ರನ್ನು ಭೆಟಿಯಾಗಲು ಸಲಹೆ ನಿಡಬೇಕು. ಮನಶಾಸ್ತ್ರಜ್ಞರನ್ನು ಭೆಟಿಯಾಗಿ ಆಪ್ತಸಮಾಲೋಚನೆ ಮಾಡುವದು ಇನ್ನೂ ನಮ್ಮ ದೇಶದಲ್ಲಿ ನೇಪಥ್ಯದಲ್ಲೆ ಇದೆ ಅನ್ನಬಹುದು.ಎಲ್ಲೋ ದೊಡ್ಡ ಪಟ್ಟಣಗಳಲ್ಲಿ ಆರ್ಥಿಕ ಸ್ಥಿತಿ ಚನ್ನಾಗಿರುವವರು ಕೆಲವು ಜನ ಮಾತ್ರ ಮಾನಸಿಕ ರೋಗ ತಜ್ಞ ರ ಸಲಹೆ ಚಿಕಿತ್ಸೆ ಗೆ ಪಡೆದುಕೊಳ್ಳುತ್ತಾರೆ.ಇನ್ನುಳಿದಂತೆ ಗ್ರಾಮೀಣ ಭಾಗದ ಜನರು ಮಾನಸಿಕ ರೋಗ ತಜ್ಞ ರೆಂದರೆ ಹುಚ್ಚರ ವೈದ್ಯರು ಎಂದು ಬಲವಾಗಿ ನಂಬಿದ್ದಾರೆ. ಹುಚ್ಚು ಹಿಡಿದವರು ಮಾತ್ರ ಮಾನಸಿಕ ರೋಗ ತಜ್ಞ ರಲ್ಲಿ ಹೋಗುವರೆಂಬ ಬೇರೂರಿದ ನಂಬಿಕೆ ಬಹಳ ಜನರನ್ನು ಆ ವೈದ್ಯರಲ್ಲಿ ಹೋಗುವುದನ್ನು ತಡೆಯುತ್ತದೆ. ಮಾನಸಿಕ ರೋಗ ತಜ್ಞ ರಲ್ಲಿ ತೋರಿಸಿದರೆ ಜನ ತಮ್ಮನ್ನು ಮಾನಸಿಕ ಅಸ್ವಸ್ಥ ಎನ್ನುವರೆನೋ ಎಂಬ ಅಳುಕು. ಎಲ್ಲಿ ಸಮಾಜ ತಮ್ಮನ್ನು ಹುಚ್ಚರ ಸಾಲಿಗೆ ಸೇರಿಸುವದೋ ಎಂಬ ದಿಗಿಲಿನಿಂದ ತಮ್ಮ ಮನಸ್ಥಿತಿ ಎಷ್ಟೆ ಹದಗೆಟ್ಟರೂ ಸೈಕ್ರಿಯಾಟಿಸ್ಟ್ ಹತ್ತಿರ ತೊಇರಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ.

ಇದ್ದಕ್ಕೆ ಮತ್ತೊಂದು ಕಾರಣವೆಂದರೆ ಮಾನಸಿಕ ರೋಗದಿಂದ ಆಗುವ ದುಷ್ಪರಿಣಾಮಗಳ ಅರಿವು ಜನರಿಗೆ ಇಲ್ಲದಿರುವದು.ಮನಸ್ಸು ಹದಗೆಟ್ಟರೆ ತನ್ನಿಂತಾನೆ ಸರಿ ಹೋಗುತ್ತದೆ ಎಂಬ ನಂಬಿಕೆ. ನಮಗೆ ಸಾಮಾನ್ಯವಾಗಿ ಗೊತ್ತಿರುವ ರೋಗಗಳಾದ ಬಿ ಪಿ , ಶುಗರ್ , ಥೈರಾಯ್ಡ್ , ಇವುಗಳಿಂದಾಗುವ ತೊಂದರೆ ಗಳ ಅರಿವು ಸಾಮಾನ್ಯವಾಗಿ ಎಲ್ಲರಿಗೂ ಇದೆ.ಇವು ದೇಹದಲ್ಲಿ ಸ್ರವಿಸುವ ಹಾರ್ಮೋನ್ ಗಳಿಂದ ಬರುವ ತೊಂದರೆಗಳು.ಆದರೆ ಮಿದುಳಿನಲ್ಲಿ ಸ್ರವಿಸುವ ಹಾರ್ಮೊನ್ ಗಳ ಎರುಪೇರಿನಿಂದ ಬರುವ ಸಮಸ್ಯೆ ಗಳ ಅರಿವು ಬಹಳ ಜನರಿಗೆ ತಿಳಿದೆ ಇಲ್ಲ. ಮಿದುಳಿನಲ್ಲಿ ಸ್ರವಿಸುವ ಹಾರ್ಮೋನ್ ಗಳ ಎರುಪೇರು ನೇರವಾಗಿ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಧೆ. ಆತಂಕ ಖಿನ್ನತೆಗಳು ಕಾಡುವದು ಅದಕ್ಕೆ.ವಯಸ್ಸಾದಂತೆ ಹಾರ್ಮೋನ್ ಗಳ ಏರುಪೇರು ಸಹಜ.ಹೆಣ್ಣುಮಕ್ಕಳಲ್ಲಿ ಇದರ ಪರಿಣಾಮ ತುಸು ಹೆಚ್ಚೆ , ಮುಟ್ಟು ನಿಲ್ಲುವ ಸಮಯದಲ್ಲಾಗುವ ದೈಹಿಕ ಬದಲಾವಣೆಗಳು. ಕೋಪ , ಖಿನ್ನತೆ ಇವುಗಳ ಅರಿವು ಪ್ರತಿಯೊಬ್ಬ ಹೆಣ್ಣುಮಕ್ಕಳಿಗಿರುವದು ಅತಿ ಅವಶ್ಯಕ. ಈ ಸಮಸ್ಯೆ ಗಳನ್ನು ನಿವಾರಿಸಲು ಮಾನಸಿಕ ರೋಗ ತಜ್ಞರ ಅವಶ್ಯಕತೆ ಅತ್ಯಂತ ಮುಖ್ಯ ವಾಗಿದೆ.  ದೇಹದಲ್ಲಿ ಹಾರ್ಮೋನ್ ಗಳ ಕೊರತೆಯಿಂದ ಬರುವ ಶುಗರ್ ,ಥೈರಾಯ್ಡ್ ರೋಗ ಗಳಿಗೆ ಮಾತ್ರೆಮೂಲಕ ಕಡಿಮೆ ಬಿದ್ದ ರಾಸಾಯನಿಕಗಳನ್ನು ದೇಹಕ್ಕೆ ಸೇರಿಸಿ ದೇಹವನ್ನು ಆರೋಗ್ಯ ವಾಗಿರುವಂತೆ ನೋಡಿಕೊಳ್ಳಲಾಗುತ್ತದೋ ಹಾಗೇಯೇ ಮಿದುಳಿನಲ್ಲಿ ಕಡಿಮೆಯಾದ ಹಾರ್ಮೋನ್ ಗಳಿಂದ ಉದ್ಭವಿಸುವ ಆತಂಕ , ಖಿನ್ನತೆ , ಸುಸ್ತು , ಇವುಗಳನ್ನು ನಿವಾರಿಸಲು ಮಾತ್ರೆಗಳನ್ನು ನಿಡಬೇಕಾಗುತ್ತದೆ. ಇಲ್ಲಿ ಸಮಸ್ಯೆ ಎಂದರೆ ಶುಗರ್ , ಬಿಪಿ , ಥೈರಾಯ್ಡ್ ಗಳನ್ನು ರೋಗಗಳೆಂದು ಒಪ್ಪಿಕೊಂಡಷ್ಟು ಸುಲಭವಾಗಿ ಆತಂಕ , ಖಿನ್ನತೆಗಳನ್ನು ರೋಗಗಳೆಂದು ನಾವು ಒಪ್ಪಿಕೊಳ್ಳುವದಿಲ್ಲ. ಮತ್ತೊಬ್ಬರೊಂದಿಗೆ ಮುಕ್ತವಾಗಿ ಈ ವಿಷಯವನ್ನು ಚರ್ಚಿಸಲು ನಾವು ಹಿಂಜರಿಯುತ್ತೆವೆ.

ಈಗ ಚಿಕ್ಕ ಚಿಕ್ಕ ಮಕ್ಕಳು ಒತ್ತಡಕ್ಕೆ ಒಳಗಾಗುತಿದ್ದಾರೆ. ಪರಿಕ್ಷೆಯ ಒತ್ತಡ ನಿಭಾಯಿಸುವಲ್ಲಿ ಸೋಲುತಿದ್ದಾರೆ .ಪರಿಣಾಮ ಚಿಕ್ಕವಯಸ್ಸಿನಲ್ಲೇ ಮಾನಸಿಕ ಖಿನ್ನತೆ.ಅವರ ಸ್ಥಿತಿ ಗಮನಕ್ಕೆ ಬರುವಷ್ಟರಲ್ಲಿ ಸಮಯ ಮೀರಿರುತ್ತದೆ.ಪೋಷಕರು ಮಕ್ಕಳ ಮಾನಸಿಕ ಸ್ಥಿತಿ ಅರ್ಥ ಮಾಡಿಕೊಂಡು ತಡಮಾಡದೆ ಮಾನಸಿಕ ತಜ್ಞ ರ ಸಲಹೆ ಪಡೆದರೆ ಮುಂದಾಗುವ ಅವಘಡ ತಪ್ಪಿಸಬಹುದು. ಮಾನಸಿಕ ರೋಗ ಎನ್ನುವದು ಮುಚ್ಚಿಡದೆ ಮುಕ್ತವಾಗಿ ಚರ್ಚಿಸುವ ವಾತಾವರಣ ಸೃಷ್ಟಿಯಾಗಬೇಕು.ಸೈಕ್ರಿಯಾಟಿಸ್ಟ್ ಎಂಬ ವೈದ್ಯ ರ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸುವ ಪ್ರಯತ್ನ ವಿದ್ಯಾವಂತರು ಮಾಡಬೇಕಾಗಿದೆ. ಪ್ರತಿಯೊಂದು ರೋಗಕ್ಕೂ ಮೂಲ ಕಾರಣ ಮನಸ್ಸು. ಕೇವಲ ರೋಗ ಗುಣಪಡಿಸುವ ಪ್ರಯತ್ನ ಮಾಡದೆ ರೋಗದ ಮೂಲ ಹುಡುಕಿ ನಂತರ ರೋಗ ಗುಣಪಡಿಸುವ ಪ್ರಯತ್ನ ಮಾಡುವದೊಳಿತು.ಈಗಿನ ಒತ್ತಡದ ಜೀವನ ಶೈಲಿಗೆ , ಹದಗೆಡುವ ಮನಸ್ಥಿತಿ ಗೆ ಮಾನಸಿಕ ರೋಗತಜ್ಞರ ಅವಶ್ಯಕತೆ ಅತ್ಯಂತ ಪ್ರಮುಖವಾಗಿದೆ.ಯಾವದೇ ಹಿಂಜರಿಕೆ ಇಲ್ಲದೆ ನಮ್ಮ ಮನಸ್ಸಿನಲ್ಲಾಗುವ ಗೊಂದಲ , ಆತಂಕ , ಭಯ , ಖಿನ್ನತೆಗಳನ್ನು ಮುಕ್ತವಾಗಿ ಚರ್ಚಿಸಿ ಸಲಹೆ , ಚಿಕಿತ್ಸೆ ಪಡೆಯುವದು ಅತ್ಯಂತ ಜಾಣತನ.


ಮನಶಾಸ್ತ್ರಜ್ಞನ್ನು ಭೆಟಿಯಾಗಲು ಕಿಳರಿಮೆ ಬೇಡ.
ಸ್ವಸ್ಥ ಮನಸ್ಸಿದ್ದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾದ್ಯ.


ಜ್ಯೋತಿ , ಡಿ . ಬೊಮ್ಮಾ.

Leave a Reply

Back To Top