ಮೂರು ದಾರಿಗಳು
ಯಶವಂತ ಚಿತ್ತಾಲ
ಮೂರು ದಾರಿಗಳು
ಕಾದಂಬರಿ
ಯಶವಂತ ಚಿತ್ತಾಲ
ಸಾಹಿತ್ಯ ಭಂಡಾರ
ಮೂರು ದಾರಿಗಳು ಯಶವಂತ ಚಿತ್ತಾಲರ ಮೊದಲ ಕಾದಂಬರಿ.ಭೀತಿ, ಪ್ರೀತಿ ಮತ್ತು ಭಂಡಾಯ ( ಆತ್ಮನಾಶ) ; ಇವು ಈ ಕೃತಿಯಲ್ಲಿ ಉದ್ಭವಿಸಿದ ಒಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮೂರು ವ್ಯಕ್ತಿತ್ವಗಳು ಕಂಡುಕೊಳ್ಳುವ ದಾರಿಗಳು.
ಹನೇಹಳ್ಳಿ, ಸಾಣಿಕಟ್ಟಾ, ಗೋಕರ್ಣ ಮತ್ತು ಕುಮಟಾದ ಸುತ್ತಲಿನ ಪರಿಸರದ ಚಿತ್ರಣ, ಭಾಷೆ ಈ ಕಾದಂಬರಿಯಲ್ಲಿ ಸಮೃದ್ಧವಾಗಿ ಮೂಡಿಬಂದಿದೆ. ವಿಶ್ವನಾಥ ಶಾನಭಾಗರು ಸಾಣೇಕಟ್ಟೆಯ ಧಕ್ಕೆಯಿಂದ ಕುಮಟೆಯ ಕಡೆಗೆ ಹೋಗುವ ಬೋಟಿಯನ್ನು ಹತ್ತುವುದರೊಂದಿಗೆ ಕತೆ ಆರಂಭವಾಗುತ್ತದೆ.
ವಿಶ್ವನಾಥ ಶಾನಭಾಗರು ಅನುಕೂಲಸ್ಥರು ಮತ್ತು ಅಂಗಡಿಯ ಮಾಲೀಕರು. ಅವರಿಗೆ ನಿರ್ಮಲಾ ಎಂಬ ಒಬ್ಬಳೇ ಮಗಳು. ಅವಳ ಮೇಲೆ ಒಂದು ಅಪವಾದ ಬಂದಿದೆ. ಅದು ಅವಳಲ್ಲಿ, ಪಾಲಕರಲ್ಲಿ, ಕುಟುಂಬದಲ್ಲಿ, ಸಮಾಜದಲ್ಲಿ ಹೇಗೆ ತಲ್ಲಣಗಳನ್ನು ಸೃಷ್ಟಿಸಿದೆ ಎಂಬುದೇ ಇಲ್ಲಿನ ಕಥಾಹಂದರ.
ಶಾರದ ಮತ್ತು ವಿಶ್ವನಾಥರ ಮಗಳಾದ ನಿರ್ಮಲೆ ವಿದ್ಯಾಭ್ಯಾಸಕ್ಕಾಗಿ ಕಾರವಾರದ ಚಂದ್ರಭಾಗಿ ಮತ್ತು ಜೋಶಿಯವರ (ಅತ್ತೆ- ಮಾವ) ಮನೆಯಲ್ಲಿದ್ದವಳು. ರಾಮನಾಥ ಅವಳ ಬಾವ. ನಿರ್ಮಲೆ – ರಂಗಪ್ಪನ ಪ್ರಕರಣವನ್ನು ಮಾವನ ಮನೆಗೆ ತಿಳಿಸುವವರು ದೇವಪ್ಪ ನಾಯ್ಕ ಮಾಸ್ತರರು.
ಈ ಫೋಟೋಶಾಪಿನ ರಂಗಪ್ಪ,ಪ್ರಿಯಾಗಿ, ವಲ್ಲಿಗದ್ದೆ ಸುಬ್ಬ ಇವರುಗಳಿಗೆ ಊರಿನಲ್ಲಿ ಹೀನ ಸುಳಿಯವರು ಎಂಬ ಹೆಸರಿದೆ.ಅಂತಹ ರಂಗಪ್ಪನ ಅಂಗಡಿಯಲ್ಲಿ ಶಾಲೆಯ ಗೆದೆರಿಂಗ್
ನ ರಾತ್ರಿ ನಿರ್ಮಲಾ ಕಾಣಿಸಿಕೊಂಡ ಸುದ್ದಿ ಊರಲ್ಲಿ, ನೆಂಟರಿಷ್ಟರಲ್ಲಿ ಧಿಗ್ಗನೆ ಹೊತ್ತಿಕೊಳ್ಳುತ್ತದೆ.
ಆಗ ಆತಂಕಕ್ಕೆ ಒಳಗಾಗುವ ಶಾನುಭಾಗರು, ಸೀತಾ ಮತ್ತು ದಿ.ಉಪೇಂದ್ರ ಕೇಣಿಯವರ ಮಗ ವಾಸುದೇವನಿಗೆ ಮಗಳ ಮದುವೆ ಮಾಡಿಕೊಡುವ ಪ್ರಸ್ತಾಪ ಇಡುತ್ತಾರೆ. ಇದು ಸಮಾಜದಲ್ಲಿ ಮತ್ತಷ್ಟು ಅನುಮಾನವನ್ನು ಮೂಡಿಸುತ್ತದೆ.
ವಾಸುದೇವ ಮಾಸ್ತರಿಕೆ ಮಾಡುತ್ತಿರುವವನು. ಅಂತಸ್ತಿನಲ್ಲಿ ವಿಶ್ವನಾಥರಿಗೆ ಸಾಟಿಯಿಲ್ಲ.ಮದುವೆಯ ಪ್ರಸ್ತಾಪ ಬಂದಾಗ ಸಹಜವಾಗಿ ಸಮಯ ಕೇಳುತ್ತಾನೆ. ನಂತರ ನಿರ್ಮಲೆಯ ಗುಲ್ಲು ತುಂಗಕ್ಕನ ಮೂಲಕ ಸರ್ವವ್ಯಾಪಿಯಾಗುತ್ತದೆ. ಅದು ಬಾಲ್ಯದಿಂದಲೂ ಗೆಳೆಯನಾದ ಶಿನ್ನನ ಮೂಲಕ ಇವನ ಕಿವಿಯನ್ನೂ ತಲುಪುತ್ತದೆ. ಸಾಹಿತಿಯಾದ ವಾಸುದೇವ ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಮದುವೆಗೆ ತಯಾರಾಗುತ್ತಾನೆ. ಈ ಮಧ್ಯೆ ಸಂಬಂಧಿಕನಾದ ವೆಂಕಟರಮಣ ಹೆಚ್ಚಿನ ವಿಷಯ ತಿಳಿಯಲು ಶಿರಸಿಯಲ್ಲಿ ಖಾನಾವಳಿ ಮಾಡಿಕೊಂಡಿರುವ ಪ್ರಿಯಾಗಿಯ ಬಳಿ ತೆರಳುತ್ತಾನೆ. ಆಗ ಆತ ನೋಡುವುದು ಲೈಂಗಿಕ ರೋಗ ತಗುಲಿಸಿಕೊಂಡು ಹಾಸಿಗೆ ಹಿಡಿದ ವಲ್ಲಿಗದ್ದೆ ಸುಬ್ಬನನ್ನು.ಭಯಂಕರ ಅಸಹ್ಯನಾದ ಆತನನ್ನು ನೋಡಿ ಹೆದರಿ ಮನೆ ಸೇರಿದ ವೆಂಕಟರಮಣ ಮುಂದೆ ಜನರ ಬಾಯಿಗೆ ಆಹಾರವಾಗುತ್ತಾನೆ. ನಿರ್ಮಲಾಳ ಪ್ರಕರಣ ಹಿಂದೆ ಸರಿಯುತ್ತದೆ.
ಈ ಮಧ್ಯೆ ನಿರ್ಮಲೆಯ ಮನಸ್ಥಿತಿಯಲ್ಲಿ ಬದಲಾವಣೆ ಉಂಟಾಗುತ್ತದೆ. ಒಂದು ದುರಂತ ಅಂತ್ಯದೊಂದಿಗೆ ಕಾದಂಬರಿ ಕೊನೆಯಾಗುತ್ತದೆ. ಶಿಕಾರಿ, ಕೇಂದ್ರವೃತ್ತಾಂತ ಕಾದಂಬರಿಗಳನ್ನು ಮತ್ತು ಅವರ ಕಥಾಸಂಕಲನಗಳನ್ನು ಓದಿ ಈ ಕೃತಿಯನ್ನು ಓದುವವರು ನೀವಾಗಿದ್ದರೆ ಕೊಂಚ ನಿರಾಸೆಯಾಗಬಹುದು. ಅದೇ ನೀವು ಚಿತ್ತಾಲರ ಅಭಿಮಾನಿಯಾಗಿದ್ದರೆ ಇದನ್ನು ಸವಿಯಲು ಮರೆಯದಿರಿ.
******
ಡಾ. ಅಜಿತ್ ಹರೀಶಿ