ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಣ್ಣಲಿ ಅವಿತ ಜೀವ

Shallow Focus of Sprout

ಟಿ.ಪಿ. ಉಮೇಶ್

ಬದುಕ ಸಂಪಾದನೆಗೆ ಹೋದ ಜೀವ ಬರಲಿಲ್ಲ ಮರಳಿ
ಬೀದಿಯಲಿ ಅಲೆದು ತಿರುವಿನಲಿ ಕಳೆದು
ಕಛೇರಿ ಕರ್ಮಗಳ ಫೈಲುಗಳಲಿ ಹೊರಳಿ
ದಿನಸಿ ತರಕಾರಿ ಹಣ್ಣಿನಂಗಡಿಯಲಿ ಉರುಳಿ
ಲೈಬ್ರರಿ ಸಿನೆಮಾ ಪಾರ್ಕು ಪಾರ್ಟಿಗಳ ಸಂಧಿಸಿ
ನೋವಿನ ಮನೆಗೆ ಪ್ರೀತಿಯ ತರಲೋದ ಜೀವ
ಮತ್ತೆ ಮರಳಿ ಬರಲಿಲ್ಲ ಜೀವ

ಬರುವಾಗ ವಿಷದ ಮಳೆ ಬಂತಂತೆ
ದಾರಿ ಅಲ್ಲಲ್ಲೆ ಹುಗಿದು ಹೋಯ್ತಂತೆ
ಗಿಡ ಮರ ಪಶು ಪಕ್ಷಿ ಎಲ್ಲ ಉದುರಿ ಕರಗಿದುವಂತೆ
ಜೀವವೂ ನೀರು ಆಹಾರವಿರದೆ ಹೊದ್ದಾಡಿ ಸದ್ದಡಗಿತಂತೆ
ಕುಸಿಯುತಿಹ ಭೂಮಿ ಮಣ್ಣಲಿ ಮರೆಯಾಯಿತಂತೆ
ಮತ್ತೆ ಮರಳಿ ಬಾರದು ಜೀವ

ಕನಸಾದ ಸೊಗಸಾದ ಬದುಕಾಗಿದ್ದ ಜೀವ
ಜಂತಿಗಳು ಮುರಿದ ಮನೆಗೆ ತೊಲೆಯಾಗಿದ್ದ ಜೀವ
ಉರಿವ ಧಗೆಯನೆ ಕುಡಿದು ಹೂ ನಗುವ ಹಂಚುತ್ತಿದ್ದ ಜೀವ
ನೋವಿನಲೆ ದುಡಿದು ಪ್ರೀತಿಯನೆ ಗಳಿಸಿ ಉಣಿಸುತ್ತಿದ್ದ ಜೀವ
ಏನು ಹೇಳಿದರೇನು ಮತ್ತೆ ಬರುವುದೇನು ಭರವಸೆಯ ಜೀವ
ಮರಳಿ ಬಾರದು ಪ್ರೀತಿಯ ಜೀವ

ಮಳೆ ಬಾರದೆ ಯಾವ ಬದುಕಿಲ್ಲ
ವಿಷದ ಮಳೆಗೆ ಇನ್ನು ಉಳಿವಿಲ್ಲ

ಮಳೆ ಇರಲಿ ಪ್ರೀತಿಯ ಮನೆಗೆ
ವಿಷವೇಕೆ ಸಲಹುವಾ ಧರಣಿಗೆ

ಯಾರಿಟ್ಟರೊ ನಂಜು ಸಿಗದಾ ಮುಗಿಲಿಗೆ
ಬದುಕು ಬಹಳಿತ್ತು ಮಣ್ಣಲಿ ಅವಿತ ಜೀವಕೆ

********

About The Author

2 thoughts on “ಕಾವ್ಯಯಾನ”

  1. ಕಾವ್ಯಯಾನ ದಲ್ಲಿ ಕವಿತೆ ಪ್ರಕಟಿಸಿದ ಸಂಗಾತಿ ಸಂಪಾದಕರಾದ ಶ್ರೀಯುತ ಕು.ಸ.ಮಧುಸೂದನ ಸರ್ ರವರಿಗೆ ಸಹೃದಯ ಧನ್ಯವಾದಗಳು. ನಿಮ್ಮ ಪ್ರೋತ್ಸಾಹಕೆ ಚಿರಋಣಿ.

  2. ಉತ್ತಮ ಕವಿತೆ,ಶ್ರಮಿಕ ಜೀವಿಗಳ ಬದುಕು ಅನಾವರಣಗೊಂಡಿದೆ.

Leave a Reply

You cannot copy content of this page

Scroll to Top