ಇಂದಿರಾ ಮೋಟೆಬೆನ್ನೂರ-ಜತನ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಜತನ

ನೀನಿತ್ತ ನೋವ ಹೂವುಗಳ
ಕಣ್ಣ ಪಲುಕಿನಲಿ
ಕಾಪಿಟ್ಟು ಕೊಂಡಿರುವೆ…
ಬಹು ಜತನವಾಗಿ
ಮುರುಟದಂತೆ…

ನಿತ್ಯ ನೆನಪುಗಳ ಸಿಂಚನದಿಂದ
ನಳ ನಳಿಸುವಂತೆ…
ಸವಿ ಮಾತುಗಳ ಹೃದಯ
ಹಂದರದಲ್ಲಿ ಹೂ ಬಳ್ಳಿಯಾಗಿಸಿ
ಹಬ್ಬಿಸಿರುವೆ….

ನಿನ್ನ ನಗೆ ಮುತ್ತುಗಳ ಎತ್ತಿ
ಮಾಲೆಯಾಗಿಸಿಹೆ..
ನಿನ್ನ ಸವಿ ನೆನಪುಗಳ
ಜೋಳಿಗೆಯ ಹೊತ್ತು
ಅಲೆಯುತಿರುವೆ…

ನಿನ್ನ ಬಿಸಿಯುಸಿರ ಕಾವಿನ
ಪಿಸು ಮಾತುಗಳ ಕಲರವವ
ಎದೆ ಗೂಡಲಿ ಬಚ್ಚಿಟ್ಟಿರುವೆ..
ಪ್ರೀತಿ ಪಣತಿಗೆ ಬೆಳಕ ಮುಡಿಸಿ
ನೀ ಬರುವ ಹಾದಿಯಲಿ
ನೆದರ ನೆಟ್ಟು ಕಾಯುತಿರುವೆ…

ನೀ ಸುರಿಸಿದ ಒಲವ ಹನಿ ಹನಿಯ
ಹಾಡಿನಲಿ ಮೈ ಮರೆತು…
ನೀ ಮೂಡಿಸಿದ ಸ್ನೇಹದಂಬಿನ
ಮಳೆಬಿಲ್ಲ ಬಣ್ಣಗಳಲಿ ಮಿಂದ
ಮೇದಿನಿಯಾಗಿರುವೆ…..

ನಿನ್ನ ಹೆಸರ ಬೆಳದಿಂಗಳ ಬೆಳಕಿನಲಿ
ಬೆಳ್ಳಕ್ಕಿಯಾಗಿ ಎದೆ ಬಾನಲಿ
ನಿನ್ನನ್ನೇ ಅರಸುತಿರುವೆ…
ಮಧುರ ಪಯಣ ಸವಿ ಘಳಿಗೆಗಳ
ಮನದಿ ಮೌನದಿ ಎರಕ ಹೊಯ್ದಿರುವೆ…


ಇಂದಿರಾ ಮೋಟೆಬೆನ್ನೂರ.

Leave a Reply

Back To Top