ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ.
ರಾಧಾ-ಮಾಧವರ ಒಲವಿನಕಾವ್ಯದ ಹನಿಗಳು
- ನಿನಾದ.!
ಕೇಳಿದೊಡನೆ ಮುರಳಿಯ
ಮಧುರ ಸ್ವರಗಳ ರಿಂಗಣ
ಮಾಯವಾಯ್ತು ರಾಧೆಯ
ಕಾಯುವಿಕೆಯ ಅಸಂಖ್ಯ
ಬೇಗುದಿ ಅಸಹನೆ ತಲ್ಲಣ.!
- ಆರಾಧನೆ.!
ಗೋಕುಲದ ಗೋಪಿಕೆಯರಿಗೆಲ್ಲ
ಗೋಪಾಲ ಎಂದು ಒಲಿಯಲಿಲ್ಲ
ಕಾರಣ ರಾಧೆಯಷ್ಟು ಮತ್ಯಾರು
ಕೃಷ್ಣನ ಅನವರತ ಆರಾಧಿಸಲಿಲ್ಲ.!
- ವಿಷಾದ.!
ಪರಿಹರಿಸುವುದರಲ್ಲಿ ಶ್ರೀಕೃಷ್ಣ
ಕೌರವಪಾಂಡವರ ರಾಜಕಾರಣ
ಮರೆತೆಹೋದ ತನಗಾಗಿ ಅನುಕ್ಷಣ..
ಪರಿತಪಿಸುವ ರಾಧೆ ಅಂತಃಕರಣ.!
ರಾಜಧರ್ಮದ ಭವ್ಯ ಪ್ರಭೆಯೆದುರು
ನಂದಿತು ಪ್ರೇಮಧರ್ಮದ ಹೊಂಗಿರಣ.!
- ಬವಣೆ.!
ಗಂಟಾನುಗಟ್ಟಲೆ ಕಾಯುವಿಕೆಯ
ಚಡಪಡಿಕೆ ತುಮುಲಗಳ ತಲ್ಲಣ
ಕನಲಿಕೆ ನಿನಗೇನು ಗೊತ್ತು ಕೃಷ್ಣ?
ಕಾಲವೇ ಕಲ್ಲಾಗಿ ನಿಂತಂತೆ ಭಾಸ
ಕ್ಷಣಕ್ಷಣವೂ ಭಾರವಾದಂತೆ ಶ್ವಾಸ.!
- ಒಲವಿನವತರಣ
ಯುಗಯುಗಕು ಮುಗಿಯದು
ಜಗವಿರುವವರೆಗು ಮರೆಯದು
ರಾಧಾಮಾಧವರ ಪ್ರೇಮಲಹರಿ
ಒಲವಿಗೆ ನವ ಭಾಷ್ಯ ಬರೆದು
ಚಿರಂತನ ಅಮರಗೊಳಿಸಲೆಂದೆ
ಅಂದು ಅವತರಿಸಿದನು ಶ್ರೀಹರಿ.!
- ಕುರುಹು.!
ಮಧುವನಕೆ ಇಂದಿಗು
ರಾಧಾಮಾಧವರ ಗುಂಗು
ಅನುಕ್ಷಣವೂ ಅಡಿಗಡಿಗು
ಅವ್ಯಕ್ತ ಒಲವಿನ ಗುನುಗು
ಇದುವೆ ಚಿರಪ್ರೇಮದ ರಂಗು.!
ಎ.ಎನ್.ರಮೇಶ್.ಗುಬ್ಬಿ.