ಕಾಲದ ಕರೆ
ಡಾ.ಪ್ರಸನ್ನ ಹೆಗಡೆ
ಮನೆಯ ಒಳಗೇ ಉಳಿಯಬೇಕಾಗಿದೆ
ನಮ್ಮನ್ನ ನಾವೇ ಉಳಿಸಿಕೊಳಬೇಕಾಗಿದೆ
ನಮ್ಮ ನಂಬಿದವರ ನಾವೇ ರಕ್ಷಿಸಿಕೊಳಬೇಕಾಗಿದೆ
ಒಳಗಿದ್ದುಕೊಂಡೇ ಸಮರ ಸಾರ ಬೇಕಾಗಿದೆ
ಮುಖಗವಚ ಧರಿಸಬೇಕಾಗಿದೆ
ವೈರಾಣುವ ದೂರವೇ ಇಡಬೇಕಾಗಿದೆ
ನಡುನಡುವೆ ಅಂತರ ಕಾಪಾಡಿಕೊಂಡು
ನಮ್ಮ ನಮ್ಮ ಅಂತಸ್ಥ ಮೆರೆಯಬೇಕಾಗಿದೆ
ಕಾಲ್ಗಳ ಕಂಬವಾಗಿಸಿಕೊಂಡು ಇದ್ದಲ್ಲೇ ಇರಬೇಕಾಗಿದೆ
ಮನಸ್ಸನ್ನು ಕಲ್ಲಾಗಿಸಿಕೊಂಡು ಯೋಚಿಸಬೇಕಾಗಿದೆ
ಶಿರವನ್ನೇ ಹೊನ್ನಗಲಶವಾಗಿಸಿಕೊಂಡು
ಆತ್ಮಜ್ಯೋತಿಯ ಬೆಳಗಬೇಕಾಗಿದೆ
ಮನದಿ ಕುಣಿವ ಮಂಗಗಳ ಹಿಡಿದು
ಉದ್ಯಾನವನ ಉಳಿಸಿಕೊಳಬೇಕಾಗಿದೆ
ಉಳಿದಿದ್ದೆಲ್ಲವ ನಾಳೆಗೆ ಮುಂದೂಡಿ
ಈ ದಿನವ ಹೇಗೋ ದೂಡಬೇಕಾಗಿದೆ
ಹೊರಗೆ ಆಡುವ ಮಕ್ಕಳ ಕರೆದು
ಬದುಕಿನಾಟವ ಕಲಿಸಬೇಕಾಗಿದೆ
ಹಿಡಿ ಹಿಡಿದು ವ್ಯಯ ತೂಗಿಸಿ
ನಾಳೆಗೂ ಉಳಿಸಿಕೊಳಬೇಕಾಗಿದೆ
ಶುಭ್ರ ಹಸ್ತರಾಗಬೇಕಾಗಿದೆ
ಶುದ್ಧ ಚಿತ್ತರಾಗಬೇಕಿದೆ
ಶುಚಿತ್ವವೇ ದೈವತ್ವವೆಂಬ
ಅಮರ ಸಂದೇಶ ಸಾರಬೇಕಾಗಿದೆ
ಈ ಯುದ್ಧ ಗೆಲ್ಲಬೇಕಾಗಿದೆ
ಈ ರಾಷ್ಟ್ರವ ಉಳಿಸಿಕೊಳ್ಳ ಬೇಕಾಗಿದೆ
ಸಹಸ್ರ ಸವಾಲ್ಗಳಿಗೆ ಎದೆಯೊಡ್ಡಬೇಕಾಗಿದೆ
ಅದಕಾಗಿ ನಾವೆಲ್ಲ ಸಜ್ಜಾಗಬೇಕಿದೆ
ಮೂರನೇ ಕಣ್ಣ ತೆರೆಯಬೇಕಾಗಿದೆ
ಕಾಣದ ಕ್ರಿಮಿಯ ಹುಡುಕಬೇಕಾಗಿದೆ
ಲಕ್ಷಣ ರೇಖೆಯೊಳಗಿದ್ದುಕೊಂಡೇ
ಶೂರ್ಪನಖಿಯ ಮೂಗ ಹಿಂಡಬೇಕಾಗಿದೆ.
******
ತುಂಬಾ ಅರ್ಥಬದವಾಗಿದೆ. ಸೊಗಸಾದ ಕವನದ ಸಾಲುಗಳು