ಕಾವ್ಯಯಾನ

ಗಝಲ್

green palm tree leaf at daytime

ತೇಜಾವತಿ ಹೆಚ್. ಡಿ

ಅಭಿಮಾನದ ಎದೆಪುಟದಲಿ ಅನುಮಾನದ ಸಾಲುಗಳೇತಕೆ ಗೆಳೆಯಾ
ಆತ್ಮಸಾಕ್ಷಿಯ ದೀಪದೆದುರಲಿ ಅಂಧಕಾರದ ಚಿಂತೆಗಳೇತಕೆ ಗೆಳೆಯಾ

ಅಂಗೈಯ್ಯಲೇ ಮಾಣಿಕ್ಯವಿದ್ದರೂ ಅದರಾಕರ್ಷಿತರ ಗೊಡವೆಗಳೇತಕೆ ಒಡೆಯಾ
ನಿನ್ನಂತರಂಗದೊಳು ನಾನು ಪಣತಿಯಾಗಿದ್ದರೂ ಭ್ರಮೆಗಳೇತಕೆ ಗೆಳೆಯಾ

ಹದವರಿತು ಹೆಪ್ಪಾಗಿರುವ ಮೊಸರಿನಲಿ ಕಲ್ಲ ಹುಡುಕುವುದೇತಕೆ ಇನಿಯಾ
ಒಳಗವಿತಿರುವ ಕಂಪಿನ ಘ್ರುತವಿದ್ದರೂ ನಾರುವ ಭಾವಗಳೇತಕೆ ಗೆಳೆಯಾ

ನೋವುನಲಿವಲೂ ಜೊತೆಯಾಗಿ ಹಿಂಬಾಲಿಸುವ ನೆರಳ ಬಾಧಿಸುವುದೇತಕೆ ಹೃದಯಾ
ನೆರಳಿಗೆ ನಿನ್ನ ಹೊರತು ಮತ್ಯಾವ ಆಸರೆ, ನಿನಗೆ ಭಯಗಳೇತಕೆ ಗೆಳೆಯಾ

ದುಃಖಗಳ ಮನದ ಮರುಭೂಮಿಯಲಿ ಬಿಸಿಗಾಳಿಯಾಗಿ ಸುಳಿಯುವುದೇತಕೆ ಗೆಣೆಯಾ
ಹಗಲುತೇಜದಿ ದಾಹವ ತಣಿಸಲು ಹವಣಿಸುತ್ತಿರುವ ಜೀವಕೆ ಮೃಗಜಲಗಳೇತಕೆ ಗೆಳೆಯಾ

*****

Leave a Reply

Back To Top