ಜೇಡರ ದಾಸಿಮಯ್ಯನ ವಚನ-ಪ್ರೊ. ಜಿ.ಎ ತಿಗಡಿ

ವಚನ ಸಂಗಾತಿ

ಜೇಡರ ದಾಸಿಮಯ್ಯನ ವಚನ-

ಪ್ರೊ. ಜಿ.ಎ ತಿಗಡಿ

ತೊಡೆಯಲ್ಲಿ ಮುದ್ರೆಯನೊತ್ತಿದಡೇನು?
ಅದು ನಡೆಯಲ್ಲಿ ಶುಚಿಯಾಗಬಲ್ಲುದೆ?
ಮಡಿಲಲ್ಲಿ ಲಿಂಗವ ಕಟ್ಟಿದಡೇನೊ?
ಲೋಕದ ಆಜ್ಞಾನಿತನ ಬಿಡುವುದೆ?
ನಡೆ ನುಡಿ ಸತ್ಯಸದಾಚಾರಿಗಳು
ಎಡೆಯೆಡೆಗೊಬ್ಬರು ಕಾಣಾ! ರಾಮನಾಥ.

      ತೊಡೆಯಲ್ಲಿ ದೈವದ ಲಾಂಛನಗಳ ಮುದ್ರೆಗಳನ್ನು ಹಾಕಿಸಿಕೊಂಡರೇನೂ ಫಲವಿಲ್ಲ.   ಯಾಕೆಂದರೆ ಅದು ನಡತೆಯಲ್ಲಿ ಆಚರಣೆಗೆ ಬಂದು ಶುದ್ಧವಾಗಲಾರದು.  ದೇಹದ ಮೇಲೆ ಲಿಂಗವ ಕಟ್ಟಿಕೊಂಡರೆ ಸಾಲದು,  ಅದರಿಂದ ನಮ್ಮಲ್ಲಿರುವ ಅಜ್ಞಾನಿತನ ಹೋಗಲು ಸಾಧ್ಯವೇ? ಎಂದು ದಾಸಿಮಯ್ಯನವರು ಪ್ರಶ್ನಿಸುತ್ತಾರೆ.   ಅಂದರೆ ದೇಹದ ಮೇಲೆ ಕೇವಲ ಲಾಂಛನಗಳ ಮುದ್ರೆ ಒತ್ತಿಸಿಕೊಂಡು ಲಿಂಗ ಧರಿಸಿದರೆ ಮನಸ್ಸು ಪರಿಶುದ್ಧವಾಗಿ ಅಜ್ಞಾನ ದೂರವಾಗಲಾರದು.   ಇದನ್ನು ಬಿಟ್ಟು ನಡೆ – ನುಡಿ ಒಂದಾಗಿ ಬದುಕಬೇಕು.   ಹಾಗೂ ಸತ್ಯದ ಸದಾಚಾರಗಳ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.   ಈ ರೀತಿಯ ಜೀವನ ನಡೆಸುವವರು ಲೋಕದಲ್ಲಿ  ಅಪರೂಪಕ್ಕೆಎಲ್ಲೋ ಒಬ್ಬರು ಸಿಗಬಹುದು ಅಷ್ಟೇ.   ಇಂಥವರು ನಮಗೆ ಮಾದರಿಯಾಗಬೇಕೆಂಬುದು ದಾಸಿಮಯ್ಯನವರ ಬಯಕೆ.

     ಬಾಹ್ಯಾಡಂಬರದ ಹತ್ತು ಹಲವು ಅರ್ಥವಿಲ್ಲದ ಆಚರಣೆಗಳನ್ನು ಕಂಡು  ದಾಸಿಮಯ್ಯನವರು ನೊಂದುಕೊಂಡು ಜನರ ಅಜ್ಞಾನಕ್ಕೆ ಮರುಗುತ್ತಾರೆ.  ಸಾಮಾನ್ಯ ಜನರನ್ನು ಶೋಷಿಸುವ  ಕೆಲ ಲಾಂಛನಧಾರಿಗಳನ್ನು ಕುಟುಕುತ್ತಾರೆ.  ಪ್ರಸ್ತುತ  ವಚನದಲ್ಲಿ  ಇಂತಹ  ಒಂದೆರಡು ಡಾಂಬಿಕ ಆಚರಣೆಗಳನ್ನು ಉದಾಹರಿಸುವುದರ  ಮೂಲಕ ಅಂಗದ ಮೇಲೆ ಹಾಕಿಕೊಳ್ಳುವ ಮುದ್ರೆಗಳಿಂದ, ದೇಹದ ಮೇಲೆ ಧರಿಸುವ ಹತ್ತು ಹಲವು ಲಾಂಛನಗಳಿಂದ, ಅಂತರಂಗದ ಮೇಲೆ ಏನೂ ಪರಿಣಾಮ ಆಗದು.  ಇಂಥವರನ್ನು ದೇವರು ಎಂದಿಗೂ  ಮೆಚ್ಚಲಾರನೆಂದು ಅಲ್ಲಮಪ್ರಭುಗಳು ಹೇಳುತ್ತಾರೆ.

ಮಜ್ಜನಕ್ಕೆರೆವರೆಲ್ಲ, ಇದ್ದಲ್ಲಿ ಫಲವೇನು?
ಮುದ್ರಾಧಾರಿಗಳಪ್ಪರಯ್ಯಾ.
ಲಿಂಗದಲ್ಲಿ ನಿಷ್ಠೆಯಿಲ್ಲ, ಜಂಗಮದಲ್ಲಿ ಪ್ರೇಮವಿಲ್ಲ
ವೇಷಧಾರಿಗಳಪ್ಪರಯ್ಯಾ.
ಲಾಂಛನ ನೋಡಿ ಮಾಡುವ ಭಕ್ತಿ,
ಸಜ್ಜನಸಾರಾಯವಲ್ಲ,
ಗುಹೇಶ್ವರ ಮೆಚ್ಚನಯ್ಯಾ

 ಲಾಂಛನಗಳ ಮೂಲ ತತ್ವದ ಸ್ವರೂಪವನ್ನರಿಯದೆ ಅವುಗಳನ್ನು ಅಂಗದ ಮೇಲೆ ಧರಿಸುವುದು ಮೂರ್ಖತನ.    ಅವುಗಳನ್ನು ಅರ್ಥವ ನ್ನರಿತು ಅದನ್ನು ನಡತೆಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕವೆನಿಸುತ್ತದೆ.    ಕಾರಣ ಇಲ್ಲಿ ನಾವು ಧರಿಸುವ ಲಾಂಛನಗಳು ಮುಖ್ಯವಲ್ಲ,  ಅವುಗಳ ಹಿಂದಿನ ತತ್ವ ಮುಖ್ಯ; ಜೀವನದಲ್ಲಿ ಅವುಗಳ ಅನುಷ್ಠಾನ ಮುಖ್ಯ.  ಹೀಗೆ ಶರಣರ ಸೂಳ್ನುಡಿ  ಮತ್ತು ಸತ್ಯ ಸದಾಚಾರಗಳನ್ನು ಅಳವಡಿಸಿಕೊಂಡವರು,  ನುಡಿದಂತೆ ನಡೆಯುವವರು ದೊರಕುವುದು ವಿರಳಾತಿ ವಿರಳ.   ಎಲ್ಲೋ ಒಬ್ಬರು ಸಿಗಬಹುದು.  ಲೋಕದ ಜನರೆಲ್ಲ ಇಂತಹ ಸದಾಚಾರಿ ಸದ್ಗುಣಿಗಳಾಗಬೇಕೆಂಬುದು ದಾಸಿಮಯ್ಯನವರ ಆಶಯವಾಗಿದೆ.

————————————————–

ಪ್ರೊ. ಜಿ.ಎ ತಿಗಡಿ

Leave a Reply

Back To Top