ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಒಂಟಿತನದ ಕನವರಿಕೆ…!
ಕಡ್ಡಿ ಗೀರಿದಾಗ ಬೆಂಕಿ
ಹತ್ತಿದಂತೆ ಉರಿದುಹೋಯಿತು ಭಾವ,
ಇನ್ನೇಕೆ ಉಳಿದೀತು ಈ ಜೀವ…!
ಅರಿಯಬಾರದೆ ಮನಸಿನ
ಪುಟದಲ್ಲಿನ ನೋವ….!!
ದಿನಪೂರ್ತಿ ಸುತ್ತುವ ಗಡಿಯಾರ
ಟಿಕ್ ಟಿಕ್ ಸದ್ದುಮಾಡುತ
ಹೃದಯ ಮಿಡಿಯುತ್ತಿದೆ…!
ಜಾರಿದ ನೆನಪುಗಳ ಬುಗ್ಗೆಯಲ್ಲಿ
ಮೀನಾಗಿ ಮೀಯುತ್ತಿದೆ…!!
ಸವಿಸ್ಪಪ್ನಗಳು ಕಳೆಗುಂದಿ
ಹತ್ತಿದ ಮೇನೆ ಜಾರಿಹೋಯಿತು,
ಜೀವನ ಹಳಿ ತಪ್ಪಿದ ರೈಲಾಗಿದೆ,..!
ಸಪ್ಪೆಯಾದ ಬಾಳ ಪಯಣ
ತೂತು ಬಿದ್ದ ಕೌದಿಯಾಗಿದೆ…..!!
ಎದೆಯ ಕನ್ನಡಿಯಲ್ಲಿ ನಿನ್ನಬಿಂಬ
ಚೂರಾಗಿ ಹೋಯಿತಲ್ಲ ಕಾರಣವೇನು…!
ಉದಯಿಸಿದ ಭಾವಕ್ಕೆ ತಣ್ಣೀರೆರಚಿ
ಮನವ ಕದಲಿಸಿ ಹೋಗುವೆಯೇನು..!!
ಹಾಳು ರಸ್ತೆಯ ಒಂಟಿ ಮರದಂತೆ
ನೆರಳಿಲ್ಲದೆ ಒದ್ದಾಡಿದೆ
ಇರುಳಿನ ಕನಸಿನಲ್ಲಿ ಕನವರಿಸುತ
ಒಳಗೊಳಗೆ ಗೊಣಗಿದೆ..
ದಕ್ಕದಿಹ ಸೂರಿನಡಿಯಲ್ಲಿ ಒಂಟಿತನ
ಕಾಡುತ್ತಿದೆ ಬೆಂಬಿಡದ ಭೂತದಂತೆ
ಇರುಳಿನ ಚಂದ್ರನಂತೆ ಪ್ರಭೆ ಬೀರು..!
ಕಮರಿಹೋದ ಕನಸುಗಳ ಕೊನರಿಸಿ
ಈ ನೊಂದ ಹೃದಯವನು ಸೇರು…!!
ಶಂಕರಾನಂದ ಹೆಬ್ಬಾಳ