‘ಶಾಶ್ವತ ಇಲ್ಲೇನಿಲ್ಲ’ ಕವಿತೆ-ಡಾ. ಅನ್ನಪೂರ್ಣ ಹಿರೇಮಠ

ಕಾವ್ಯ ಸಂಗಾತಿ

‘ಶಾಶ್ವತ ಇಲ್ಲೇನಿಲ್ಲ’

ಡಾ. ಅನ್ನಪೂರ್ಣ ಹಿರೇಮಠ

ಅಂತೆ ಕಂತೆಗಳಿಗೆ ಕಿವಿಯ ಕೊಡುವುದ್ಯಾತಕೋ
ಮನುಜ ಸಂತೆಯೊಳಗೆ ಬಿದ್ದು ಒದ್ದಾಡುವುದ್ಯಾತಕೋ
ಮೂರು ದಿನದ ಸಂತೆ ಇದು ಬಾಳ
ಚಿಂತೆ ಮಾಡಬ್ಯಾಡ ತಿಳಿಯೋ ತಮ್ಮಾ//

ಮೋಜು ಮಸ್ತಿ ಬಾಳ ಮಾಡುತಿ ಯಾಕೋ
ಅವರಿವರ ಮಾತು ಕೇಳಿ ಕೆಡುವುದ್ಯಾತಕೋ
ಹಿತಮಿತ ಆಸೆ ಇರಲಿ ದುರಾಸೆ ಯಾಕೋ
ನಿನ್ನೊಳಗ ನೀ ತಿಳಿದು ನಡಿಬೇಕೋ ತಮ್ಮಾ//

ಪದವಿ ಪಟ್ಟಕ್ಕಾಗಿ ಹೊಡೆದಾಟ ಯಾಕೋ
ಹಣದ ಬೆನ್ನತ್ತಿ ಕತ್ತಲೆ ಸೇರತಿ ಯಾಕೋ
ಹೆಣವಾಗು ದೇಹದ ಮ್ಯಾಲ ತೀರದ
ಅತಿ ಮೋಹ ವ್ಯಾಮೋಹ ಪಡೋದ್ಯಾತಕೋ//

ಮೋಸ ಕಪಟ ಅಸೂಯೆ ಯಾತಕೋ
ಎಲೆ ಮನುಜ ಭ್ರಷ್ಟತೆಯ ಹೇಸಿ ಬಾಳದ್ಯಾತಕೋ
ದುಡಿದು ಬೆವರು ಸುರಿಸಿ ತಿನ್ನದೇ ಎಂಜಲು ತಿನ್ನುತ
ಹೇಡಿ ಬಾಳು ಬಾಳೋದು ಅದ್ಯಾಕೋ//

ಕದನ ಜಗಳ ಕಚ್ಚಾಟ ಯಾತಕೋ
ಎಲೆ ಮನುಜ ಒಡಕಿನ ಕೆಡಕು ಅದ್ಯಾಕೋ
ಒಗ್ಗಟ್ಟೇ ಬಲ ಒಂದಾದರೆ ಪ್ರೀತಿ
ಒಲವ ಕಟ್ಟು ಮುರಿದು ನಗುವುದ್ಯಾತಕೋ//

ಶಾಶ್ವತ ಇಲ್ಲಿ ಯಾರೂ ಯಾವುದೂ ಇಲ್ಲೋ
ಹೊತ್ತುಕೊಂಡು ಹೋದವರು ಯಾರಿಲ್ಲೋ
ಬೇವು ಬೆಲ್ಲ ಉಂಡು ಇದ್ದು ಜೈಸಬೇಕೋ
ನಾಕಮಂದಿ ಬಾಯಾಗ ಉಳಿವಂತ ಕೆಲಸ
ಮಾಡೇ ಸಾಯಬೇಕು//


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top