ಡಾ. ಮೀನಾಕ್ಷಿ ಪಾಟೀಲ್ ಕವಿತೆ-‘ಮೌನವೇ ಮಾತಾದಾಗ’

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ್ ಕವಿತೆ

‘ಮೌನವೇ ಮಾತಾದಾಗ’

ನಿನ್ನೆ ರಾತ್ರಿಯ ಹೊನ್ನ ಕನಸುಗಳೆಲ್ಲ
ನನಸಾಗಿಸುವ ದಾವಂತವೇಕೆ
ಅಷ್ಟೆತ್ತರದ ನೀನು ನೆಲ ಮುಗಿಲ
ಒಂದಾಗಿಸುವ ಹಠವೇಕೆ
ನಿನ್ನ ಕನಸಿನ ಚೆಲುವೆ ನಾನಲ್ಲ
ಕಲ್ಪನೆಯ ಬೆಡಗಿಯು ನಾನಲ್ಲ
ನಿಜವೆಂಬ ಭ್ರಮೆಯೇತಕೆ
ಗಾಳಿ ಹೂವಿನ ಪರಿಮಳ ಅರಸುವ
ದುಂಬಿಯಾಗುವ ಆಸೆ ಏಕೆ
ಮೇರು ಪರ್ವತ ನೀನು
ಬಯಲ ಭೂಮಿಯು ನಾನು
ಚಂದ್ರ ಮಂಡಲದೆದೆಯ ಸಖಿ ನಾನಲ್ಲ
ನನ್ನ ಹೃದಯ ಗೂಡಿನಲ್ಲಿ ಬೆಚ್ಚಗಾಗುವ ಆಸೆ ಏಕೆ
ಬೇಡ ಬಂಧವಾಗುವ ತೆರದೆ
ಹರಿಯುವ ನೀರಿಗೆ ತನ್ನದೇ ದಿಕ್ಕು
ದಿಕ್ಕು ಬದಲಿಸುವ ಹಂಬಲ ಏಕೆ
ನೆನ್ನೆ ಮೊನ್ನೆ ಕೂಡಿ ಕಳೆದ
ಕೂಟ ಆಟಕ್ಕೆ ಕವನ ಕಟ್ಟುವುದೇತಕೊ
ಬೆಳಗು ಸಂಜೆಯು ನಿನ್ನ ಮೊಗವೆ ಕಂಗಳಲ್ಲಿ
ಎಂದು ಹಲಬುವುದೇತಕೊ
ಯಾವ ಜನ್ಮದ ಋಣವೊ
ಕಣ್ಗೆ ರೂಪವು ಮೀಟಿತೇಕೊ
ಎದೆಗೆ ಪ್ರೇಮವು ಚಿಮ್ಮಿತೆಕೊ
ಬಯಕೆ ಕಾಣದೆ ಮನದ ಬೇಗೆ
ಒಡಲ ಸುಡುವುದೇತಕೊ
ಮೌನವೇ ಮಾತಾದಾಗ
ಬೆಚ್ಚನೆಯ ಭಾವ ಮನಕೆ ಹಿತವೆನಿಸಿಹುದು


ಡಾ. ಮೀನಾಕ್ಷಿ ಪಾಟೀಲ್

4 thoughts on “ಡಾ. ಮೀನಾಕ್ಷಿ ಪಾಟೀಲ್ ಕವಿತೆ-‘ಮೌನವೇ ಮಾತಾದಾಗ’

  1. ಮೌನವೇ ಮಾತಾದಾಗ…. ಅತ್ಯಂತ ವಿಭಿನ್ನ ರೀತಿಯಲ್ಲಿ ಅಭಿವ್ಯಕ್ತಿ ಹೊಂದಿದ ಕವನ…
    ಒಂದಕ್ಕಿಂತ ಒಂದು ಕವಿತೆಯ ಸಾಲುಗಳು ಕುತೂಹಲ ಮೂಡಿಸಿದವು… ಮೇಡಂ

    1. ಮೇಡಂ ತಮ್ಮ ಸ್ಪಂದನೆಗೆ ಅನಂತ ಅನಂತ ಧನ್ಯವಾದಗಳು

  2. ಮೀನಾಕ್ಷಿ ಪಾಟೀಲ್ ಮೇಡಂ,
    ಬಹಳ ಸುಂದರ ಭಾವಾಭಿವ್ಯಕ್ತಿ….
    *ಚಂದ್ರ ಮಂಡಲದೆದೆಯ ಸಖಿ ನಾನಲ್ಲ*
    *ನನ್ನ ಹೃದಯ ಗೂಡಿನಲ್ಲಿ ಬೆಚ್ಚಗಾಗುವ ಆಸೆ ಏಕೆ?*
    ನೆಲ –ಮುಗಿಲ, ಮೇರು ಪರ್ವತ –ಬಯಲು ಭೂಮಿಯ…ಪ್ರೀತಿ…
    *ನಿನ್ನೆ ಮೊನ್ನೆ ಕೂಡಿ ಕಳೆದ ಕೂಟ ಆಟಕ್ಕೇ ಕವನ* *ಕಟ್ಟುವುದೇತಕೋ?*.
    ಬಾನಂಗಳದ ತಾರೆಯರೆಲ್ಲರ ಮನದಂಗಳದ ಬೆಳಕಾದ… ನಕ್ಕು ಚುಕ್ಕಿ ಗೆಳತಿಯರ ಹೃದಯವನ್ನೇ ಕದ್ದು ಹಕ್ಕಿಯಂತೆ ಹಗುರಾಗಿ ತೇಲುತಿರುವ ಚಂದ್ರಮನನ್ನೇ ಪ್ರಶ್ನಿಸುವ ಎದೆಗಾರಿಕೆ…..
    ಮೆಚ್ಚಬೇಕಾದದ್ದೇ…..
    — ಇಂದಿರಾ…

Leave a Reply

Back To Top