ಲಲಿತಾ ಮು.ಹಿರೇಮಠರವರ ಕಿರು ಲೇಖನ ‘ಮಿಡ್ಲ್ ಕ್ಲಾಸ್ ಜೀವನ’

ಲೇಖನ ಸಂಗಾತಿ

ಲಲಿತಾ ಮು.ಹಿರೇಮಠ

‘ಮಿಡ್ಲ್ ಕ್ಲಾಸ್ ಜೀವನ’

 ಮಿಡ್ಲ್ ಕ್ಲಾಸ್ ಜೀವನ

   ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ .ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ .ಅವನ ನಿಯಮ ಮೀರಿ ಇಲ್ಲಿ ಏನು ಸಾಗದು. ನೀನು ಎನಿಸಿದಂತೆ ಬಾಳಲೇನು ನಡೆಯದು.

    ಎಂಬ ಅರ್ಥಗರ್ಭಿತವಾದ ಸಾಲುಗಳೊಡನೆ ಇವತ್ತಿನ ಮಿಡ್ಲ್ ಕ್ಲಾಸ್ ಜೀವನದ ಬಗ್ಗೆ ನನ್ನ ಮಾತುಗಳಿವು.

ಮನುಷ್ಯನೆಂದರೆ ಆಸೆ ಸಹಜ. ಅದರಲ್ಲೂ ಒಳ್ಳೆಯ ಕೆಲಸ, ಒಳ್ಳೆಯ ಹೆಂಡತಿ ,ಒಳ್ಳೆಯ ಮಕ್ಕಳು ,ಮನೆ ,ಒಳ್ಳೆಯ ಆಸ್ತಿ ಆಸ್ತಿ ಇದು ಎಲ್ಲರ ಕನಸೇನೋ ನಿಜ .ಆದರೆ ಇದು ಎಲ್ಲರ ಭಾಗ್ಯದಲ್ಲಿ ಇರುವುದಿಲ್ಲ. ಸಮಾಜದಲ್ಲಿ ಅದೆಷ್ಟೋ ಜನರು ಹಗಲು ರಾತ್ರಿ ದುಡಿದರೂ ಚಿಲ್ಲರೆ ದುಡ್ಡನ್ನು ಕೂಡಿಡ ಲಾರದ ಪರಿಸ್ಥಿತಿಯಲ್ಲಿ ಇರುತ್ತಾರೆ .ಬಹಳಷ್ಟು ಕಡೆ ಅವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಸಿಗದಿರುವುದು, ಮತ್ತೊಂದಿಷ್ಟು ಕಡೆ ಹೆಚ್ಚು ಗಳಿಕೆ ಇದ್ದರೂ ಮನೆಯವರೆಲ್ಲರ ಬೇಕು ಬೇಡುಗಳನ್ನು ಬರಿಸುವಷ್ಟರಲ್ಲಿ ಅದು ಖಾಲಿಯಾಗುವುದು ಹೀಗೆ ಹಲವು ಕಾರಣಗಳಿಂದ ಇಲ್ಲಿ ಮಿಡಿಲ್ ಕ್ಲಾಸ್ ಜನ ಹಾಗೆ ಉಳಿದುಬಿಟ್ಟಿರುತ್ತಾರೆ. ಅವರ ಜೀವನ ಆರಕ್ಕೆರದೆ ಮೂರಕ್ಕೆ
 ಇಳಿಯದೆ ಯಥಾ ಸ್ಥಿತಿಯಲ್ಲಿ ನಡೆಯುತ್ತಿರುತ್ತದೆ.

     ಈ ತರ ಜೀವನವನ್ನು ಹಳಿದುಕೊಳ್ಳುವವರು ಹಲವರಾದರೆ ಇದೇ ಜೀವನಕ್ಕೆ ಒಗ್ಗಿಕೊಂಡು ಪರಿಸ್ಥಿತಿಗೆ ಅನುಗುಣವಾಗಿ ಹೋಗುವವರೆಗೆನೂ ಕಡಿಮೆ ಇಲ್ಲ. ಈ ಸಂತೋಷ ಎನ್ನುವುದು ನಾವು ನಡೆದುಕೊಳ್ಳುವ ನಡತೆಯಲ್ಲಿದೆ.ನೋಡುವ ನೋಟದಲ್ಲಿದೆ. ಇದ್ದುದ್ದರಲ್ಲಿಯೇ ಚೆನ್ನಾಗಿ ಜೀವನ ನಡೆಸುವುದು ಒಂದು ಕಲೆಯೇ.

     ಇವರು ಬಟ್ಟೆ ತೆಗೆದುಕೊಳ್ಳಲು ಆಲೋಚಿಸುತ್ತಿದ್ದಾರೆ ಎಂದರೆ ಇವರ ಮುಂದೆ ದೊಡ್ಡ ದೊಡ್ಡ ಮಾಲುಗಳಿರುವುದಿಲ್ಲ ಬದಲಾಗಿ ಸಣ್ಣ ಸೇಲ್ಗಳು, ಚಿಕ್ಕಪುಟ್ಟ ಅಂಗಡಿಗಳು ಇರುತ್ತವೆ. ಅಲ್ಲಿರುವ ಹಲವಾರು ವೈವಿಧ್ಯಮಯ ಬಟ್ಟೆಗಳನ್ನು ತೆಗೆದುಕೊಳ್ಳುವಲ್ಲಿ  ಅವರು ತೃಪ್ತಿ ಹೊಂದುತ್ತಾರೆ. ದೊಡ್ಡ ದೊಡ್ಡ ರೆಸ್ಟೋರೆಂಟ್ ಗಳ ನಂಟು ಇವರಿಗೆ ಇರದೇ ಹೋದರೂ ಹಾದಿಬದಿಯ ತಳ್ಳುಗಾಡಿಗಳ ಪಾನಿಪುರಿ, ಗೋಬಿ ಹಾಗೂ ಮಿರ್ಚಿ, ಮಂಡಕ್ಕಿಯನ್ನು ಅವರು ತಿನ್ನುವಾಗ ಅನುಭವಿಸುವ ಖುಷಿಯೇ ಅಪಾರ.

      ಹಬ್ಬ ಹರಿ ದಿನಗಳಲ್ಲಿ ಅವರ ದೇವರ ಪೂಜೆಗಳಲ್ಲಿ ಸಾಕಷ್ಟು ಬಂಗಾರ ,ಬೆಳ್ಳಿ ,ನಗದು ಇರದೇ ಇರಬಹುದು. ಆದರೆ ಆ ಬಡವರ ಪೂಜೆ ಬರಿ ಹೂವಿನಿಂದ ಹಾಗೂ ಅವರ ಭಕ್ತಿಯಿಂದ ಕಳೆ ಕಟ್ಟಿರುತ್ತದೆ ಎಂಬುದನ್ನು ಯಾರು ತಳ್ಳಿ ಹಾಕುವಂತಿಲ್ಲ .ಕಾಂಪೌಂಡು ಮನೆ ಅವರದ್ದಲ್ಲದಿದ್ದರೂ ಸಾಧಾರಣ ನೆಲದ ಅಂಗಳದಲ್ಲಿ ಅವರ ಪ್ರೀತಿಯ ಚುಕ್ಕಿಯ ರಂಗೋಲಿಗಳು ಆ ಮನೆಗೆ ವಿಶೇಷವಾದಂತಹ ಶೋಭೆಯನ್ನು ಉಂಟುಮಾಡುತ್ತಿರುತ್ತವೆ.

      ಬೆಳ್ಳಿಯ ತಟ್ಟೆಯ ತುಂಬಾ ವಿವಿಧ ಪರಮಾನ್ನ ಭಕ್ಷಗಳ ಸವಿ ಇರದಿದ್ದರೂ ,ಸಾಧಾರಣ ಸ್ಟೀಲ್ ತಾಟಿನಲ್ಲಿ ಅವರು ಕಷ್ಟಪಟ್ಟು ತಂದ ದುಡ್ಡಿನಲ್ಲಿ ಹಿತಮಿತವಾಗಿ ಮಾಡಿದ ಒಂದೆರಡು ತಿನಿಸುಗಳೇ ಅವರಿಗೆ ಪರಮ ಸಂತೋಷವನ್ನು ನೀಡುತ್ತವೆ. ಒಬ್ಬ ಬಡ ಹುಡುಗನ ಕೈಯಲ್ಲಿ ನೂರರ ನೋಟನ್ನು ಕೊಟ್ಟಾಗ ಅವನ ಕಣ್ಣುಗಳು ಕನಸಿನ ದಿಬ್ಬಣ ವಾಗಿರುತ್ತವೆ.ಅಲ್ಲಿ ನೂರಾರು ಕನಸುಗಳು ಗರಿಗೆದರಿ ನಿಂತಿರುತ್ತವೆ. ಆ ಒಂದು ನೂರರ ನೋಟಿನ ಮೇಲೆ ಅವನಿಗೆ ಅಪಾರ ಅಭಿಮಾನವಿರುತ್ತದೆ ಗೌರವವಿರುತ್ತದೆ. ಆ ನೂರರ ನೋಟಿಗೂ ಇಲ್ಲಿ ಸರಿಯಾದ ಗೌರವ ಸಿಕ್ಕಂತಾಯಿತು ಅಲ್ಲವೇ?

   ಮನೆ ಮಂದಿ ಎಲ್ಲಾ ಮನೆಯ ಚಾಪೆಯ ಮೇಲೆ ಕುಳಿತು ಟಿವಿ ನೋಡುವ ಖುಷಿ ,ಊಟ ಮಾಡುವ ಸಂತೋಷ ಮತ್ಯಾವುದೆ ಮೋಜು ಮಸ್ತಿಗಳಲ್ಲಿ ಸಿಗಲಾರದು. ಕೆಲಸದಿಂದ ಸಂಜೆ ಮನೆಗೆ ಬರುವ ಅಪ್ಪ ತರುವ ತಿಂಡಿಯ ಪೊಟ್ಟಣ ಪಕ್ಕದ ಮನೆಯ ಮಕ್ಕಳಿಗೂ ಆಗುವಂತಿರುತ್ತದೆ ಇಲ್ಲಿ ಪ್ರೀತಿ ಬೆಟ್ಟದಷ್ಟಿರುತ್ತದೆ.

      ಮನೆಯಂಗಳದಲ್ಲಿ ಅಕ್ಕಪಕ್ಕದ ಹೆಂಗಳೆಯರು ಕೂಡಿ ಹರಟುವ ಆ ಮಾತುಗಳಿಗೆ ಸಮಯದ ಅರಿವು ಇರಲಾರದು. ಒಬ್ಬರಿಗೊಬ್ಬರು ನೋವಾದರೆ ಇನ್ನೊಬ್ಬರು ಹೆಗಲಾಗುವ ಬಾಂಧವ್ಯ ಮರೆಯಲಾಗದು. ಹಂಚಿ ತಿನ್ನುವ ಇವರ ಮನೋಭಾವ ಎಂದಿಗೂ ಬದಲಾಗದು. ಅವರಿಗೆ ಇಲ್ಲಿ ಯಾವ ಪ್ರತಿಷ್ಠೆಯ ಗರಿಯೂ ಇರುವುದಿಲ್ಲ. ದುಡ್ಡಿನ ಅಹಂಕಾರವಿರುವುದಿಲ್ಲ. ಅಂತಸ್ತುಗಳ ಅಡಚಣೆ ಇರುವುದಿಲ್ಲ. ಹಾಗೆ ಪ್ರೀತಿ ವಿಶ್ವಾಸಕ್ಕೆ ಕೊರತೆಯೂ ಇರುವುದಿಲ್ಲ.


ಲಲಿತಾ ಮು.ಹಿರೇಮಠ

One thought on “ಲಲಿತಾ ಮು.ಹಿರೇಮಠರವರ ಕಿರು ಲೇಖನ ‘ಮಿಡ್ಲ್ ಕ್ಲಾಸ್ ಜೀವನ’

Leave a Reply

Back To Top