ಆದಪ್ಪ ಹೆಂಬಾರವರ ಕವಿತೆ ‘ಮುಗಿಲ ಮುತ್ತುಗಳು ಉದುರುತಿದ್ದ ಹೊತ್ತು’

ಕಾವ್ಯ ಸಂಗಾತಿ

ಆದಪ್ಪ ಹೆಂಬಾರವರ ಕವಿತೆ

‘ಮುಗಿಲ ಮುತ್ತುಗಳು ಉದುರುತಿದ್ದ ಹೊತ್ತು’

ಅಂದು ಸಂಜೆಯ ಹೊತ್ತು
ನಾ ಹೋಗಬೇಕಿತ್ತು
ನನ್ನವಳ ತೌರು ಮನೆಗೆ
ಮುಗಿಲದು ಸುರಿಸುತಲಿತ್ತು
ತಾ ಹೊತ್ತ
ಮುತ್ತುಗಳನೀ ಧರೆಗೆ

ನಗುತ ಸ್ವಾಗತಿದಳವಳು ಹಿಗ್ಗೆನಗೆ ….
ಅವಳ ಬೇಕುಬೇಡಗಳ ತಿಳಿಯಬೇಕೆನಿಸಿ
ನಾನುಲಿದೆ ಸಣ್ಣಗೆ
“ಏನು ಬೇಕೇಳು ನಿನಗೆ ?
ದಿಬ್ಬಣಗಳಲುಟ್ಟು ಉಬ್ಬಿ ನಡೆದಾಲೊಂದು ರೇಷ್ಮೆ ಸೀರೆ?”

ಮುನಿದ ಲಕ್ಷಣವಿಲ್ಲ
ಮುಗಿಲಗಲ ಮೊಗವರಳಲಿಲ್ಲ
ನನ್ನವಳು ಮಾತಾಡಲಿಲ್ಲ
ನಾ ಮೌನಿಯಾಗಲಿಲ್ಲ

“ಕೊರೆವ ಛಳಿಯಲಿ
ನಾನಿಲ್ಲದ ಹೊತ್ತಿನಲಿ
ತಬ್ಬಿ ಹೊದೆಯಲೊಂದು
ಕಾಶ್ಮೀರ ಶಾಲು ತರಲೆ ?”

ತಲೆ ಎತ್ತಿ ನೋಡಲಿಲ್ಲ
ತುಟಿ ಬಿಚ್ಚಿ
ಏನೊಂದನೂ
ಉಸುರಲಿಲ್ಲ

“ಬಂಗಾರ ಬಣ್ಣವಿದೆ ನಿನ್ನ ಮೈಕೈಗು
ಹಸಿರು ಬಳೆ ತೊಟ್ಟರದಕಿನ್ನಷ್ಡು ಮೆರಗು
ವಜ್ರದುಂಗುರ ತೊಟ್ಟರೆ ನಿನ್
ಬೆರಳದೆಷ್ಟು ಲಕ್ಷಣ !
ಬಯಸಿಯಾದರೆ ನೀ‌ನವನು
ನಾ ತರುವೆ ತಕ್ಷಣ”

ಮೌನ ಗೌರಿ.
ಕಣ್ಣರಳಲಿಲ್ಲ
ಮೊಗವರಳಿ ಮಲ್ಲಿಗೆಯಂತಾಗಲಿಲ್ಲ
ನನ್ನೊಡೆತನದ ಕೋಪವನು ಹೊರಗೆ ಬಿಡದೆ
ನಾನುಲಿದೆ ಸಣ್ಣಗೆ

“ನಿನ್ನ ಮಾತದು ಮುತ್ತಿಗೆ ಸಮವಿರಲಿ
ಆ ಮುತ್ತುಗಳನಾರಿಸುವ ಕೆಲಸ
ನನಗೆ ಇರಲಿ
ನಿನ್ನ ಬಯಕೆಗಳ ತಿಳಿಯಬಾರದೆ ನಾನು ?
ಮೌನವಾಗಿರದೆ ಮಾತನಾಡೆಯಾ ನೀನು ?”

ಕೊನೆಗೂ…….
ಮಾತೊಂದ ನುಡಿದಳಾಕೆ
“ನನ್ನರಸಿ” ಬರುವಾಕೆ

“ವಸ್ತ್ರ ಒಡವೆಗಳೇಕೆ
ಥರಥರದ ದಿರಿಸುಗಳೇಕೆ ?
ನೋವಿರಲಿ ನಲಿವಿರಲಿ
ಒಲವ ತೋರುವ ಒಡೆಯ ನೀವಿಲ್ಲವೇ ?
ಮುಗಿಲಿಗೂ ಮಿಗಿಲಾದ ಈ ಒಲವೊಂದೆ ಸಾಕಲ್ಲವೆ ?”

ಮೌನಿಯಾಗುವ ಸರದಿ ನನ್ನದಾಯಿತು
ಸಮಯಕ್ಕೆ ಸರಿಯಾಗಿ
ಮಾವ ಬಂದಾಯ್ತು

ಮಾತೊಂದನಾಡದೇ ಕಣ್ಣಲ್ಲೇ ಹೇಳಿದೆ ನಾ ಹೋಗಿಬರುವೆನೆಂದು
ನಡೆದೆ ನಾ ನನ್ ತೌರುಮನಗೆ
ಬಂದ ದಾರಿಗೆ ಯಾವ ಸುಂಕವಿಲ್ಲೆಂದು


ಆದಪ್ಪ ಹೆಂಬಾ ಮಸ್ಕಿ

Leave a Reply

Back To Top