ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ನನ್ನನು ಮಣ್ಣು ಮಾಡಿದ ಮೇಲೆ ಒಮ್ಮೆ
ಹೋಗಿ ಅವನನು ಮಾತಾಡಿಸಿಬಿಡಿ
ಅವನ ನಲ್ಮೆಯ ಮಾತುಗಳೀಗ ನನಗುಸಿರು
ನೀಡಲಾರವೆಂದು ಹೇಳಿಬಿಡಿ
ನಾ ಬರುವೆನೆಂದು ರೆಪ್ಪೆಗಳ ಹಾಸಿ
ಕಾಯುತಿರಬಹುದು
ನನ್ನ ಹೆಣಕೆ ತಾಕಿದ ಹೂವೊಂದ
ನೀಡಿ ಸಂತೈಸಿಬಿಡಿ
ಕಣ್ಣಿಂದ ಕಂಬನಿ ಕೆಳಜಾರಿ
ಕಪಾಳಕೆ ಇಳಿಯದಿರಲಿ
ಎಂದಿನಂತೆ ಕಣ್ಣೊರೆಸಲು ನನ್ನ ಕರವು
ಬರದೆಂದು ತಿಳಿಸಿಬಿಡಿ
ಪ್ರೀತಿಗೆ ಸಾವಿಲ್ಲ ಎಂಬುದು
ದಿಟವಾದರೂ ಪ್ರೀತಿಸಿದವರಿಗಿದೇಯಲ್ಲ ,
ಕೊಟ್ಟ ಮಾತಿಗೆ ತಪ್ಪಿ ನಡೆದಳೆಂದು
ಜರಿದರೆ ಜರಿಯಲುಬಿಡಿ
‘ವಾಣಿ’ ಅಳಿದರೂ, ಅಳಿಯದು ಎಂದಿಗೂ
ಅವಳನುರಾಗ
ಬಯಸಿದರೇ, ಗೋರಿಗೆ ಕಿವಿಗೊಟ್ಟು
ಆತ್ಮದ ಆರ್ತನಾದ ಕೇಳಲುಬಿಡಿ
ವಾಣಿ ಯಡಹಳ್ಳಿಮಠ
Very beautiful mam
Thank u so much