ಕಾವ್ಯ ಸಂಗಾತಿ
ಸಿದ್ದು ಸಾವಳಸಂಗ ಕವಿತೆ-
ಕೋರಿಕೆ
ದೇವ ವರುಣ
ಇಲ್ಲವೆ ನಿನಗೆ
ಮಾನವರ ಮೇಲೆ ಕರುಣ !
ನಿನ್ನ ಆರ್ಭಟಕೆ
ಹಾರಿ ಹೋಗುತ್ತಿವೆ
ಧರೆಯ ಮೇಲೆ ಸಾವಿರಾರು ಹರಣ !
ಮೈದುಂಬಿ ಹರಿಯುತ್ತಿವೆ
ನದ-ನದಿಗಳ ಪಾತ್ರ
ತುಂಬಿ ಚೆಲ್ಲಿವೆ ಹಳ್ಳ-ಕೊಳ್ಳಗಳು ಪೂರ್ಣ !
ಕುಶಿದು ನಾಶವಾಗುತ್ತಿವೆ
ದೀನ-ದಲಿತರ ಶಿಥಿಲ
ಮನೆಗಳು ಸಂಪೂರ್ಣ !
ರಕ್ಷಣೆ ಇಲ್ಲದೆ
ಬೀದಿಗೆ ಬಿದ್ದವರಿಗೆ
ಕಾಡುತ್ತಿದೆ ಭಯ-ಮರಣ !
ಬರಬೇಕಾದಾಗ ಬರದೆ
ತಡವಾಗಿ ಬಂದು ಎಲ್ಲವನು
ಮಾಡಿದೆ ನೀನು ಆಪೋಷಣ !
ನಿನಗೆಲ್ಲಿ ಕೇಳಬೇಕು
ನಮ್ಮವರ ಕೂಗು ಬಹುಶಃ
ನಿನ್ನದು ಮಂದ ಕರ್ಣ !
ಕೆಲಸ ಕಾರ್ಯಗಳಿಲ್ಲದೆ
ರೈತ ಬಂಧುಗಳು
ಹೊಡೆಯುತ್ತಿದ್ದಾರೆ ಬರೀ ನೊಣ !
ಹೊಸದಾಗಿ
ಬದುಕು ಕಟ್ಟಿಕೊಳ್ಳಲು
ಹೆಣಗಬೇಕು ಮತ್ತೆ ಬಡಜನ !
ಸಾಕಪ್ಪ ಸಾಕು ನಿಲ್ಲಿಸು
ನಿನ್ನ ಈ ರಣ ರೌದ್ರಾವತಾರ
ನಿನಗೆ ನಮ್ಮ ಅನಂತಾನಂತ ಶರಣು ವರುಣ !!
ಪ್ರೊ. ಸಿದ್ದು ಸಾವಳಸಂಗ
ಪ್ರಸ್ತುತ ಸಂದರ್ಭದ ಕವಿತೆ ಚೆನ್ನಾಗಿದೆ ಸರ್ ಧನ್ಯವಾದಗಳು
ಸೂಪರ್ ಸರ್
ಫೈನ್ ಸರ್