ಮಕ್ಕಳ ವಿಭಾಗ

ಗುಬ್ಬಚ್ಚಿ

House Sparrow Identification, All About Birds, Cornell Lab of ...

ಮಲಿಕಜಾನ್ ಶೇಖ್ 

ಒಂದು ಸುಂದರ ಕಾಡು. ಅಲ್ಲೊಂದು ಸಿಹಿ ನೀರಿನ ಹೊಂಡ. ಅದರ ದಂಡೆಗೆ ಆಲದ ಮರ, ಅದರ ಕೆಳಗಿದ್ದ ಜಾಲಿ ಮರವು ನೀರಿನತ್ತ ಬಾಗಿತ್ತು. ಅದರ ಟೊಂಗೆಗೆ ಒಂದು ಗುಬ್ಬಚ್ಚಿ ಗೂಡು ಕಟ್ಟಿಕೊಂಡು ಮಕ್ಕಳ ಜೊತೆ ವಾಸವಿತ್ತು. ಆ ಆಲದ ಮರದ ಮೇಲೆ ಕಾಗೆಗಳ ಗ್ಯಾಂಗು. ಅವರಲ್ಲಿ ಸಭ್ಯ ಕೋಗಿಲೊಂದು ವಾಸವಿತ್ತು.

           ಗುಬ್ಬಚ್ಚಿಗೆ ಶಿಸ್ತು ಮತ್ತು ಸ್ವಚ್ಛತೆ ಬಹಳ ಇಷ್ಟ. ಅರುಣೋದಯದ ಮುಂಚೆ ಗೂಡಿನ ಹೊರ ಬಂದು ದೂರ ಹೋಗಿ ಶೌಚ ಮಾಡಿ, ಚಿಲಿಪಿಲಿ ಗಾನದಿ ಮರದಿಂದ ಮರಕ್ಕೆ ಜಿಗಿಯುತ್ತಾ, ನಲಿಯುತ್ತಾ… ಹೊಂಡಕ್ಕೆ ಸ್ನಾನಕ್ಕಾಗಿ ಹೋಗುತಿತ್ತು. ಸ್ನಾನ ಮಾಡಿ ಸೂರ್ಯನ ಎಳೆಯ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಕೂತು, ಬುರ್ರೆಂದು ಗೂಡಿಗೆ ಬಂದು ಮಕ್ಕಳ ನೋಡಿ ತಿಂಡಿ ಹುಡುಕಲು ಭರ್ರೆಂದು ಹೋಗುತ್ತಿತ್ತು.

        ಅತ್ತ ಕಾಗೆಗಳ ದಿನಚರಿ ಬೇರೇನೆ. ಎಲ್ಲರಿಗಿಂತ ತಡವಾಗಿ ಎದ್ದು ಕಾವ್ ಕಾವ್ ಗದ್ದಲ ಸುರು ಇಡುತ್ತಿದ್ದವು. ಅಲ್ಲಿ, ಇಲ್ಲಿ ಎಲ್ಲಿಯೂ ಸಿಕ್ಕ ಸಿಕ್ಕಲ್ಲಿ ಶೌಚ ಮಾಡುತ್ತಿದ್ದವು. ಗಾನವಿಲ್ಲ, ಸ್ನಾನವಿಲ್ಲ . ನೇರ ಹಳಸಿದ ಅನ್ನ ಅಥವಾ ಸತ್ತ ಪ್ರಾಣಿ ತಿನ್ನಲು ಅವರ ಗ್ಯಾಂಗು ಭರ್ರೆಂದು ರವಾನೆ ಆಗುತಿತ್ತು. ಅವೆಲ್ಲಾ ಹೋದ ನಂತರ ಕೋಗಿಲೆ ಮಾತ್ರ ಗುಬ್ಬಚ್ಚಿಯಂತೆ ಸ್ವಚ್ಛ ಸ್ನಾನ ಮಾಡಿ ಮಾವಿನ ಅಥವಾ ಹುಣಸೆ ಚಿಗುರು ತಿಂದು ಕೂಡುತ್ತಿತ್ತು.

              ಒಂದು ದಿನ ಗುಬ್ಬಚ್ಚಿ ಮಕ್ಕಳ ತಿಂಡಿಗಾಗಿ ಹೋದಾಗ ಕಾಗೆಗಳೆಲ್ಲಾ ಕೂಡಿ ದೊಡ್ಡ ರಂಪಾಟವನ್ನೆ ಮಾಡಿದ್ದವು. “ಕೋಗಿಲೆ ನಮ್ಮ ಜಾತಿಯವಳಲ್ಲಾ, ಅವಳಿಗೆ ನಮ್ಮ ಪರಂಪರೆ ಗೊತ್ತಿಲ್ಲಾ..” ಎಂದು ಹೇಳಿ ಕಾಗೆ ಗ್ಯಾಂಗು ಅದಕ್ಕೆ  ಕಾಡಿ, ಕಚ್ಚಿ ಹಾರಿ ಹೋಗಿತ್ತು. ಅಷ್ಟರಲ್ಲಿ ಗುಬ್ಬಚ್ಚಿ ಚುಂಚಿನಲ್ಲಿ ತಿಂಡಿ ತಂದು ಚಿಂವ್ ಚಿಂವ್ ಎಂದು ಬಾಯಿ ತೆರೆದು ಕೂತ ಮಕ್ಕಳ ಬಾಯಿಗೆ ಹಾಕಿದಾಗ ಮಕ್ಕಳು, “ಅಮ್ಮಾ, ಛೀ.. ಥೂ ಏನೋ ವಾಸನೆ,,” ಎಂದವು. ಅದಕ್ಕೂ ವಾಸನೆ ಸಹಿಸದು, ಹೊರಬಂದು ನೋಡಿದರೆ ಅಲ್ಲಿ ಕಾಗೆ ಶೌಚ ಮಾಡಿತ್ತು. ಸಿಟ್ಟು ಬಂತು. ಆದರೆ ಅಲ್ಲಿ ಯಾರು ಇಲ್ಲ. ಸುಮ್ಮನಾಗಿ ಸ್ವತಃ ಕಡ್ಡಿಯಿಂದ ತೆಗೆದು ಹಾಕಿತು. ಆಗ ಅದರ ಗಮನ ಎಲೆಯಲ್ಲಿ ಭಯದಿಂದ ಅವಿತ ಕೋಗಿಲೆಯತ್ತ ಹೋಯಿತು. “ಏನ್ ಕೋಗಿಲಕ್ಕಾ ಹೀಗೆ ಕೂತೆಯಲ್ಲಾ ಏನಾಯಿತು..?” ಎಂದು ಕೇಳಿತು. ಆಗ ಕೋಗಿಲೆ ಅಳುತ್ತಾ, “ಗುಬ್ಬಕ್ಕಾ ಏನ್ ಹೇಳಲಿ ನನ್ನ ಪಾಡು, ಇಷ್ಟು ದಿನ ಸುಮ್ಮನಿದ್ದು ಇಂದು ಒಮ್ಮೇಲೆ ನೀನು ನಮ್ಮ ಜಾತಿಯವಳು ಅಲ್ಲಾ, ಹೋಗು ಇಲ್ಲಿಂದ ಅಂದವು. ನೀನೆ ಹೇಳು ಗುಬ್ಬಕ್ಕಾ,, ನಮ್ಮಮ್ಮಾ ಇಲ್ಲಿ ಮೊಟ್ಟೆ ಇಡುವಾಗ ಇವರ ಜಾತಿ ಕೇಳಿದಳಾ, ಇಲ್ಲವಲ್ಲ.” ಎಂದು ಹೇಳಿತು. ಆಗ “ಇರಲಿ ಬಿಡು ಕೋಗಿಲಕ್ಕಾ, ಹುಚ್ಚು ಕಾಗೆಗಳು ಅವು..” ಗುಬ್ಬಚ್ಚಿ ಸಾಂತ್ವನ ಮಾಡಲು ಕೋಗಿಲೆ, “ಇಲ್ಲ.. ನಾನಿಲ್ಲಿ ಇರುವದಿಲ್ಲಾ, ಸಂಕಟದಲ್ಲಿ ಇವರೆ ನನ್ನ ಹತ್ತಿರ ಬರುತ್ತಾರೆ..” ಹೇಳಿ ಬುರ್ರೆಂದು ಹಾರಿತು.

                 ಎಲ್ಲ ಹಕ್ಕಿಗಳು ರವಿ ಮುಳುಗುತ್ತಿದ್ದಂತೆ ಗೂಡು ಸೇರುತಿದ್ದವು. ಆದರೆ ಕಾಗೆಗಳು ಮಾತ್ರ ತಡವಾಗಿ ಬಂದು ಒಂದೆರಡು ತಾಸು ಗಲಭೆ ಮಾಡಿ ಮಲಗುವ ರೂಢಿ. ಕಾಗೆಗಳು ಬಂದ ತಕ್ಷಣ ಗುಬ್ಬಚ್ಚಿ, “ಯಾರು ನನ್ನ ಗೂಡಿನ ಮೇಲೆ  ಶೌಚ ಮಾಡಿದಿರಿ, ಸ್ವಲ್ಪನಾದರೂ ಮಾನ ಮರ್ಯಾದೆ ಇದೆಯಾ ನಿಮಗೆ..?” ಎಂದು ರೇಗುತ್ತದೆ. ಈ ಮಾತು ಕೇಳಿದ ನಾಯಕ ಕಾಗೆ, “ಯಾರು ಗುಬ್ಬಿನಾ, ಲೇ ನೀನು ನನ್ನ ಕೊಕ್ಕಿನಷ್ಟು ಇದ್ದಿಯಾ..? ನನ್ನ ಮುಂದೆ ಮಾತನಾಡುವ ಧೈರ್ಯ ನಿನಗೆ. ನಿಲ್ಲು ನಿನ್ನನ್ನು..” ಅಷ್ಟರಲ್ಲಿ ಇನ್ನೊಂದು ಕಾಗೆ, “ಇರಲಿ, ಶಾಂತ ಆಗಣ್ಣಾ, ಬೇಡಾ. ಅದು ನಮಗೆಲ್ಲಿ ಸಾಲುತ್ತದೆ, ಲೇ ಗುಬ್ಬಿ ನಾನೇ ಶೌಚ ಮಾಡಿದ್ದು, ಏನು ಇವಾಗ..?” “ಅಲ್ಲಪ್ಪಾ ಕಾಗೆಗಳಿರಾ, ನೀವೆಲ್ಲಾ ಹೀಗೆ ಹೊಲಸು ತಿಂದು ಸುತ್ತಮುತ್ತ ಗಲೀಜು ಮಾಡಿದರೆ ಹೇಗೆ..? ನಿಮ್ಮ ಕ್ರೂರ ಕರ್ಮ ನಾಳೆ ನಮ್ಮ ಇಡಿ ಪಕ್ಷಿ ಸಂಕುಲಕ್ಕೆ ಸಂಕಟ ತರಬಹುದು..” ಎಂದು ಗುಬ್ಬಚ್ಚಿ ಬುದ್ಧಿ ಮಾತು ಹೇಳಲು ಹೋದಾಗ, ಕಾಗೆಗಳೆಲ್ಲಾ ಗಹ ಗಹಿಸಿ ನಗುತ್ತಾ, “ನಮಗೆ ಬುದ್ಧಿ ಮಾತು ಹೇಳಬೇಡ. ನೀನ್ಯಾರು,,? ನಮ್ಮ ರಕ್ಷಣೆಗೆ ದೇವಿ ಕಾಗಮ್ಮಾ ಇದ್ದಾಳೆ..” ಎಂದವು. ಆಗ ಗುಬ್ಬಚ್ಚಿ ಸುಮ್ಮನೆ ಹೋಗಿ ಮಕ್ಕಳೊಂದಿಗೆ ಮಲಗುತ್ತದೆ.

Eurasian Tree Sparrow | Audubon Field Guide

             ರಾತ್ರಿ ಪೂರ್ಣ ಮಳೆ. ರವಿ ಬಂದಿದ್ದು ಕಾಣುತ್ತಿರಲಿಲ್ಲ, ಅಷ್ಟು ಧಾರಾಕಾರ ಮಳೆ. ಮಧ್ಯಾಹ್ನ ಕಾಗೆಗಳಿಗೆ ಹಸಿವೆಯಾಗಿ ಜಿಟಿ ಜಿಟಿ ಮಳೆಯಲ್ಲಿಯೆ ರಾತ್ರಿ ತಂದ ಕೊಳೆತ ಮೌಂಸವನ್ನು ತಿನ್ನಲು ಪ್ರಾರಂಭ ಮಾಡುತ್ತವೆ. ಅದರಲ್ಲಿ ಒಂದು ಕಾಗೆ ಗುಬ್ಬಚ್ಚಿಯನ್ನು ತೆಗಳುತ್ತಾ, “ಏ ಸಾಧು ಗುಬ್ಬಿ, ನಿನ್ನೆ ರಾತ್ರಿ ಬಹಳ ಮಾತನಾಡುತಿದ್ದಿಯಲ್ಲಾ ಈಗೇನು ತಿನ್ನುತ್ತೀಯಾ, ಚಳಿ ಇದೆ, ಸಾಯುತ್ತಿ ಹಿಡಿ ತಿನ್ನು” ಎಂದು ಕೊಳೆತ ಮೌಂಸದ ತುಣುಕು ಗೂಡಿನತ್ತ ಬೀಸಿತು.

         ಕಾಗೆಯ ಬಾಯಿಗೆ ಏಕೆ ಸಿಕ್ಕಬೇಕೆಂದು ಗುಬ್ಬಚ್ಚಿ ಗೂಡು ಬಿಟ್ಟು ಬರಲಿಲ್ಲ. ಗೂಡಿನಲ್ಲಿದ್ದ ಸ್ವಲ್ಪ ಕಾಳು ಮಕ್ಕಳಿಗೆ ತಿನ್ನಲು ಕೊಟ್ಟು ತಾನು ಎರಡು ದಿನ ಉಪವಾಸ ಮಾಡಿತು. ಅದಕ್ಕೆ ಗೊತ್ತಿತ್ತು ಸಂಕಟ ಬಹಳ ದಿನ ಇರುವದಿಲ್ಲ. ಮಾರನೆಯ ದಿನ ಮಳೆ ನಿಂತಿತು. ಏನಾದರೂ ತಿನ್ನಲು ತರಬೇಕೆಂಬ ವಿಚಾರದಲ್ಲಿ ಹೊರಗೆ ಬಂದು ನೋಡಿದರೆ, ಕಾಗೆಗಳು ಅದರ ಗೂಡಿನ ಸುತ್ತಲೆಲ್ಲಾ ಶೌಚ ಮಾಡಿ, ಎಲುಬು ತೂಗು ಹಾಕಿದ್ದವು. ಗುಬ್ಬಚ್ಚಿಗೆ ಭಯವಾಯಿತು. ಇಲ್ಲಿಯೆ ಇದ್ದರೆ ಈ ಕಾಗೆಗಳು ಬದುಕಲು ಬಿಡುವದಿಲ್ಲ ಎಂದು ತಿಳಿದು ಮಕ್ಕಳನ್ನು  ತನ್ನ ರೆಕ್ಕೆ ಮೇಲೆ ಕೂಡಿಸಿಕೊಂಡು ಮತ್ತೊಂದು ಕಾಡಿಗೆ ಬುರ್ರನೆ ಹಾರಿತು.

              ಗುಬ್ಬಚ್ಚಿ ಹೇಳುತಿತ್ತು, ಕೇಳುತಿತ್ತು ಆದರೆ ಈಗ ಮಾತ್ರ ಕಾಗೆಗಳಿಗೆ ಹೇಳುವರಿಲ್ಲಾ, ಕೇಳುವವರಿಲ್ಲಾ. ಅವುಗಳ ಕ್ರೂರತೆ ಮತ್ತಷ್ಟು ಹೆಚ್ಚಾಯಿತು. ಸಿಕ್ಕಿದೆಲ್ಲಾ, ಸತ್ತಿದೆಲ್ಲಾ ತಿನ್ನಲು ಪ್ರಾರಂಭ ಮಾಡಿದವು. ಒಮ್ಮೆ ದೂರ ದೇಶದ ಬಾವುಲಿಗಳು ಅಲ್ಲಿಗೆ ಬಂದು ಸತ್ತು ಬಿದ್ದಿದ್ದವು. ಸಂಜೆ ಹೊತ್ತು ಮನೆಯತ್ತ ಬರುವಾಗ ಕಾಗೆಗಳ ನಾಯಕನ ಕಣ್ಣು ಅತ್ತ ಬಿದ್ದಾಗ ಸಂತೋಷದಿಂದ ತಕ್ಷಣ ಎಲ್ಲ ಕಾಗೆಗಳನ್ನು ಕರೆದು ಬೇಟೆ ಎತ್ತಿಕೊಂಡು ಮರದತ್ತ ಒಯ್ಯಲು ಹೇಳಿತು. ಅಂದು ಕಾಗೆಗಳ ಸಂಭ್ರಮ ಹೇಳತೀರದು, ಅವುಗಳ ಕಿರುಚಾಟ ಕಾಡು ತುಂಬಿತ್ತು. ಇದನ್ನು ನೋಡಿದ ಎರಡು ಮುದಿ ಕಾಗೆ, “ಏ,, ಏನು ತಿನ್ನುತ್ತಿದ್ದೀರಿ.. ಛೀ, ನಾವು ಎಂದಿಗೂ ಇಂತಹ ಪ್ರಾಣಿಗಳನ್ನು ತಿಂದಿಲ್ಲಾ, ಮೂರ್ಖಗಳಿರಾ.. ನಮಗೆಲ್ಲಾ ದೊಡ್ಡ ವಿಪತ್ತು ಕಾದಿದೆ..” ಎಂದು ಹೇಳಿ ಅವು ಸಹ ಅಲ್ಲಿಂದ ಭರ್ರೆಂದು ಹಾರಿ ಹೋದವು.

                       ಮರುದಿನ ನೋಡಿದರೆ ಎಲ್ಲ ಕಾಗೆಗಳು ಅಲ್ಲಲ್ಲೆ ಸಾಯಲು ಪ್ರಾರಂಭ ಮಾಡಿದವು. ಅವುಗಳಿಗೆ ಬಾವುಲಿಯ ರೋಗ ತಗಲಿತ್ತು. ಆ ಮಹಾಮಾರಿ ಅತ್ಯಂತ ವೇಗವಾಗಿ ಕಾಡಿನ ತುಂಬೆಲ್ಲಾ ಪಸರಿಸಿತು. ಎಲ್ಲ ಪಕ್ಷಿಗಳ ಪ್ರಾಣಕ್ಕೆ ಕುತ್ತು ಬಂತು. ಇಡೀ ಕಾಡು ಹಕ್ಕಿ ಇಲ್ಲದಂತೆ ಆಗುವ ಭಯಾನಕ ಪರಿಸ್ಥಿತಿ ನಿರ್ಮಾಣವಾಯಿತು. ಇದು ಆ ಮುದಿ ಕಾಗೆಗಳಿಗೆ ಗೊತ್ತಾಯಿತು. ಒಂದು ಕಾಲದಲ್ಲಿ ಇಂತಹ ಮಹಾಮಾರಿ ಬಂದಾಗ ಕೋಗಿಲೆ ತಂದ ಸಂಜೀವಿನಿ ಕಡ್ಡಿಯಿಂದ ಪಕ್ಷಿ ಸಂಕುಲ ಉಳಿದಿದ್ದು ಅವುಗಳ ನೆನಪಿಗೆ ಬಂತು. ಆದರೆ “ಕೋಗಿಲೆ ನಮ್ಮ ಮೇಲೆ ಸಿಟ್ಟಾಗಿ ಹೋಗಿದೆ ಅದನ್ನು ನಾವು ಕೇಳಿದರೆ ಕೊಡುವದಿಲ್ಲ,, ಏನು ಮಾಡುವುದೆಂದು..” ಮುದಿ ಕಾಗೆ ಚಿಂತಿಸಲು ಮತ್ತೊಂದು ಕಾಗೆ, “ಅದರ ಪ್ರೀತಿಯ ಗೆಳತಿ ಗುಬ್ಬಚ್ಚಿ ಕೇಳಿದರೆ ಇದಕ್ಕೆ ಸಹಕರಿಸಬಹುದು…” ಎಂಬ ವಿಚಾರದಲ್ಲಿ ಗುಬ್ಬಚ್ಚಿ ಹುಡುಕಿ ಮತ್ತೊಂದು ಕಾಡಿಗೆ ಹೊರಟವು.

               ಕೊನೆಗೆ ಬಹಳ ಪರಿಶ್ರಮದಿಂದ ಗುಬ್ಬಚ್ಚಿಯನ್ನು ಹುಡುಕಿ, ಕ್ಷಮೆ ಕೇಳಿ, “ಗುಬ್ಬಕ್ಕಾ, ನಮ್ಮ ಕಾಗೆಗಳು ಮಾಡಿದ ತಪ್ಪಿನಿಂದ ನಾವೆಲ್ಲರೂ ದೊಡ್ಡ ಸಂಕಟದಲ್ಲಿ ಸಿಲುಕಿದ್ದೇವೆ. ದಯವಿಟ್ಟು ನಮಗೀಗ ಸಂಜೀವಿನಿ ಕಡ್ಡಿ ಬೇಕು. ನೀನು ಸಹಕರಿಸಿದರೆ ಕೋಗಿಲೆ ನಮಗೆ ಕೊಡುತ್ತದೆ. ನಮ್ಮೆಲ್ಲರ ಪ್ರಾಣ ಉಳಿಯುತ್ತದೆ..” ಎಂದು ವಿನಂತಿಸಿ ಕೊಂಡವು. ತಕ್ಷಣ ಗುಬ್ಬಚ್ಚಿ ಕೋಗಿಲಕ್ಕನ ಹತ್ತಿರ ಹೋಗಿ ಎಲ್ಲ ಪರಿಸ್ಥಿತಿಯನ್ನು ಹೇಳುತ್ತಾಳೆ. ‘ಅಯ್ಯೋ..! ದೊಡ್ಡ ಸಂಕಟವೇ ಉದ್ಭವ ಆಗಿದೆಯಲ್ಲಾ..” ಎಂದು ಜೀವ ಪರ್ವತದ ಮೇಲೆ ಹೋಗಿ ಸಂಜೀವಿನಿ ಕಡ್ಡಿಯನ್ನು ತಂದು ಆ ಮಹಾಮಾರಿಯಿಂದ ಪಕ್ಷಿ ಸಂಕುಲವನ್ನು ಬದುಕಿಸುತ್ತದೆ. ಎಲ್ಲ ಹಕ್ಕಿಗಳು ಕೋಗಿಲೆಗೆ ಧನ್ಯವಾದ ಹೇಳುತ್ತವೆ. ಮುಂದೆ ಎಲ್ಲ ಹಕ್ಕಿ ಸಭ್ಯರಾಗಿ, ಪ್ರೀತಿಯಿಂದ ಒಬ್ಬರನೊಬ್ಬರು ವಿಶ್ವಾಸದಲ್ಲಿ ಕಾಣುತ್ತಾ ಬದುಕುತ್ತವೆ.

*****

4 thoughts on “ಮಕ್ಕಳ ವಿಭಾಗ

  1. ತುಂಬಾ ಅರ್ಥಗರ್ಭಿತ ಕಥೆ ಗುರುಗಳೇ, ಕಾಗೆಗಳ ತಪ್ಪು, ಬುದ್ದಿ ಮಾತು ಹೇಳುತ್ತಿದ್ದ ಚಿಕ್ಕ ಗುಬ್ಬಚ್ಚಿ, ಸಂಜೀವಿನಿ ತರುವ ಕೋಗಿಲೆಯ ಸಹಕಾರ ಎಲ್ಲ ಪಕ್ಷಿಗಳು ಒಟ್ಟಾಗಿ ಸಹಕಾರದಿಂದ ಬಾಳುವಂಥ ಈ ಕಥೆ ನೀತಿಯನ್ನು ಕಲಿಸುತ್ತದೆ. ಮಕ್ಕಳಿಗೆ ಬಹು ಇಷ್ಟ ವಾಗುವ ಈ ಕಥೆ ನಮಗೆ ಬಹಳಷ್ಟು ವಿಚಾರಗಳನ್ನು ಕಲಿಸಿತು. ಒಬ್ಬರ ಮನನೋಯದಂತೆ, ಎಲ್ಲರೂ ನಮ್ಮವರು ಎಂಬ ಭಾವ ಈ ಕಥೆ ತಿಳಿಸುತ್ತದೆ.

    1. ಈಗಿನ ಪರಸ್ಥಿತಿಗೆ ಹೋಲುವ ತುಂಬಾ ಹೋಲುವ ಕಥೆ ಗುರುಗಳೇ … ತಾವು ತುಂಬಾ ಚೆನ್ನಾಗಿ ಮನಮುಟ್ಟುವಂತೆ ತಿಳಿಸಿದಿರಿ ನನ್ನ ಮಕ್ಕಳಿಗೆ ಓದಲು ಅವರ ಅಭಿಪ್ರಾಯ ಇದು

  2. ಜಾತ್ಯತೀತ ರಾಷ್ಟ್ರವಾದ ನಮ್ಮ ಭಾರತದ ಪ್ರಸ್ತುತ ಸಮಾಜಕ್ಕೆ ಮೃದು ಮಾತಿನ ಛಾಟಿ ಏಠಿನಂತೆ ನೀತಿ ಪಾಠ ಹೇಳುತ್ತೆ ನಿಮ್ಮ ಕತೆ sir..,
    ಇನ್ನಾದರೂ ಆ ಕಾಗೆಗಲಿಗೆ ಬುದ್ಧಿ ಬರಲಿ…..

    ಆಪತ್ತು ಬಂದಾಗ ಸಂಜೀವಿನಿ ಕಡ್ಡಿ ತಂದು ಕೊಡುವ ಸಂಯಮ ನೊಂದ ಜೀವಗಳಿಗೆ ಉಳಿದಿಲ್ಲ Sir….,

    ಪ್ರಕೃತಿಯಲ್ಲಿ ಯಾವದು ಅತೀ ಆಗುತ್ತೋ ಅದು ಅಂತ್ಯ ಆಗುತ್ತೆ..

    ಇನ್ನೂ ಕಾಗೆಗಳದು ಯಾವ ಲೆಕ್ಕ…..

Leave a Reply

Back To Top