ಕಾವ್ಯ ಸಂಗಾತಿ
ಸುಮಾ ಗಾಜರೆ
ಬದುಕು ಬದುಕಾಗಿರಲಿ…


ಬದುಕು ಬದುಕಾಗಿರಲಿ….
ಬದುಕಿಗೊಂದು ಸಾರ್ಥಕದ
ಸೆಲೆ ಇರಲಿ
ನಿಜದ ನಿಸ್ವಾರ್ಥದ
ನೆಲೆ ಇರಲಿ
ಬದುಕು ಬದುಕಾಗಿರಲಿ….
ಬದುಕಿಗೊಂದು ಭವ್ಯತೆಯ
ಬೆಲೆ ಇರಲಿ
ಬೆಲೆಯಲ್ಲಿ ಗೌರವದ
ಗಮ್ಯತೆಯ ಪಾಲಿರಲಿ
ಬದುಕು ಬದುಕಾಗಿರಲಿ….
ಬದುಕಲಿ ತುಳಿದಷ್ಟು
ಚಿಗುರುವ ಕನಸಿರಲಿ
ಕನಸು ಕಾಣುವ
ನನಸು ಮಾಡುವ
ಹಂಬಲದ ಹಮ್ಮಿರಲಿ

ಬದುಕು ಬದುಕಾಗಿರಲಿ….
ಬದುಕಲಿ ಬದುಕನ್ನು
ಬದುಕಿಸುವಂತ ಮಾತುಗಳಿರಲಿ
ಶ್ವೇತ ಸ್ವಾತಿಮುತ್ತಿನಂತಿರಲಿ
ಮತಿಯ ಮತ್ತೇರಿಸದಿರಲಿ
ಹೃದಯ ಮುಟ್ಟುವಂತಿರಲಿ
ಬದುಕು ಬದುಕಾಗಿರಲಿ….
ಬಾಳಿನ ಭವ್ಯತೆಯ
ಅಭಿಮಾನದ ಹಾಡಾಗಿರಲಿ
ಸ್ವಾಭಿಮಾನದ ಗೇಯತೆಯಿರಲಿ
ಬಾಳಿನಿಂಚರದ ಇಂಪಿರಲಿ
ಸದಾ ಗುನುಗುತಿರಲಿ..
ಬದುಕು ಬದುಕಾಗಿರಲಿ…..
ಬದುಕಿನ ಚಿತ್ತಭಿತ್ತಿಯಲಿ
ನವ್ಯನಕ್ಷತ್ರಗಳ ಬೆಳಕಿರಲಿ
ಆ ಬೆಳಕು ಬಾಳಪಥಕೆ
ದಾರಿ ದೀವಿಗೆಯಾಗಲಿ
ಬಾಳು ಬೆಳಗುತಿರಲಿ
ಬದುಕು ಬದುಕಾಗಿರಲಿ…..
ಬದುಕಲಿ ಒಲವಿರಲಿ
ಆಂತರ್ಯದ ಚೆಲುವಿರಲಿ
ಸಾಧನೆಯ ಗೆಲುವಿರಲಿ
ನಲುಮೆಯಂದದ ನಲಿವಿರಲಿ
ಗುರಿಯ ತವಕವಿರಲಿ

ಬದುಕು ಬದುಕಾಗಿರಲಿ….
ಜೀವಭಾವದ ಬೆಸುಗೆಯಿರಲಿ
ತುಟಿಯಂಚಲಿ ಮಿಂಚುವ
ಕಿರುನಗೆಯ ಒಸಗೆಯಿರಲಿ
ಬದುಕು ಭಾರವೆನಿಸುವ
ಬೇಗೆ ಬಾರದಿರಲಿ
ಬದುಕು ಬದುಕಾಗಿರಲಿ…..
ಕಾರುಣ್ಯದ ಕನಲಿಕೆಯೊಳು
ಮಾಯೆಯ ಮರೀಚಿಕೆಯೊಳು
ಬದುಕಿನಾಟದ ಜವನಿಕೆಯೊಳು
ಬಂಧಗಳ ಅನುಬಂಧದೊಳು
ಬದುಕು ಬದುಕಾಗಿರಲಿ…….
ಶ್ರೀಮತಿ ಸುಮಾ ಗಾಜರೆ

Super madam ಕವನದ ಶೀರ್ಷಿಕೆ ಬಹಳ ಚೆನ್ನಾಗಿದೆ
ತುಂಬಾ ಚೆನ್ನಾಗಿದೆ. ಅಭಿನಂದನೆಗಳು ಮೇಡಂ
ಧನ್ಯವಾದಗಳು ಮೇಡಮ್
Super Medam