ಕಾವ್ಯ ಸಂಗಾತಿ
ಎ ಎಸ್. ಮಕಾನದಾರ ಕವಿತೆ-
ಪಂಜರ ಪೋಳ
ನೇಗಿಲ ಬಾಯಿಗೆ ರಕ್ತದ ಹೆಂಟೆ
ಕಪ್ಪೆ ಚಿಪ್ಪಿನ ಕಣ್ಣಲ್ಲೂ ಕೀವಿನ
ಕಮಟು
ಮನೆ ಬಿಟ್ಟೊಂದು ಮನೆಯಲ್ಲಿ ಬಾಡಿಗೆ ಗರ್ಭ
ಪಿಚ್ಚುಗಟ್ಟಿದ ಕಂಗಳು
ನರ್ತನ ಮಾಡುತ್ತಿರುವ
ಸ್ಟೇಥೆಸ್ಕೋಪ್
ವಿಟಪುರುಷನಿಗೆ ಅಡವಿಟ್ಟ ವೀರ್ಯ
ಸೀಜಿರಿಯನ್ ಕತ್ತರಿ -ಸೂಜಿ
ಸುಪ್ರಭಾತದ ಶುಭ ಘಳಿಗೆ
ಮೌಢ್ಯದ ಮಂತ್ರೋಚ್ಚಾರ
ಅಂಗೈಯಲ್ಲಿ ಇರುವ ವಿಶ್ವ
ಹೊದ್ದು ಮಲಗಿದ ಜಡತ್ವ
ಮೂರು ತಲೆಮಾರಿನ
ತಲೆ ಬಾಗಿಲಿಗೆ
ಹಚ್ಚಿದ ಸುಣ್ಣ ಬಣ್ಣ
ಒಡೆದ ಗಾಜಿನ ಚೂರು
ಕಣ್ಣಿಲ್ಲದ ಕಾಮನೂ ನಾಚಿ ನೀರಾದ ಭಂಗಿ
ಬಿತ್ತಿದ ಬೀಜ
ನಿಪ್ಪೋಸಗಿ
ಧಾರ್ಮಿಕ ಕೇಂದ್ರದ
ಜವಾರಿ ಹೋರಿ
ಗರ್ಭಧಾರಣಿ ಕೇಂದ್ರದಲಿ ಕ್ಯಾಟ ವಾಕ್
ಶೂನ್ಯ ಸಿಂಹಾಸನವೇರಿದ
ಪ್ರಭು
ಪಂಜರ ಪೋಳಿಗೆ
ಯುವ ಜನಾಂಗದ ರವಾನೆ
ಪುರುಷತ್ವದ ರುಜುತ್ವ ಬರೆದ ಇತಿಹಾಸ
ಎ ಎಸ್. ಮಕಾನದಾರ
ಕವಿತೆ ಪ್ರಕಟಿಸಿ ಪ್ರೋತ್ಸಾಹ ನೀಡುತ್ತಿರುವ ಸಂಪಾದಕ ಮಂಡಳಿಗೆ ಅಭಾರಿ ಯಾಗಿದ್ದೇನೆ