ಕಾವ್ಯ ಸಂಗಾತಿ
ಶಾಂತಲಾ ಮಧು
ಬೇಡವೇ ನಿನಗಷ್ಟು ವಿಶ್ರಾಂತಿ
ಹಗಲು ಹದಿನೆಂಟು
ಯಾಂತ್ರಿಕ ಬದುಕಿನ
ಪ್ರಶ್ನೆಉತ್ತರಗಳು ನಿನ್ನೊಳಗೆ
ನಿನ್ನ ಉಭಯಕುಶಲೋಪರಿಗೆ
ನಿನ್ನದೆ ಪ್ರಶ್ನೆ ಉತ್ತರವೂ ಕೂಡ
ವಿಶ್ರಾಂತಿ ಬೇಡವೇ ನಿನಗಿಷ್ಟು
ಹೆತ್ತೊಡಲಬಳ್ಳಿ ಬಿಚ್ಚಟ್ಟ ಮೈಮನಗಳ
ಕನ್ನಡಿಯ ನೋಟ ನಿನ್ನೊಳಗೆ
ನಿನ್ನೊಳಗೆ ಹುದುಗಿಸಿ ಹುಸಿನಗೆ
ನಕ್ಕು ಮೌನದಲಿ ಮಾತಾಗಿ
ವಿಶ್ರಾಂತಿ ಬೇಡವೇ ನಿನಗಿಷ್ಟು
ಕಳೆದ್ದು ಕೊಳೆತದ್ದು ಕಂಡು
ಕನಸ ಕಟ್ಟುತ ಕುಂತು ಕುಸಿಯುತ
ಭೂತ ಭವಿಷ್ಶತ್
ತಿಕ್ಕಾಟದಲಿ
ವರ್ತಮಾನದ
ನಿಟ್ಟುಸಿರು ನೀನಾಗಿ
ವಿಶ್ರಾಂತಿ ಬೇಡವೇ ನಿನಗಿಷ್ಟು
ಇರುಳದೋ ಅರೆಬರೆಯ ಕನಸ
ತೊಟ್ಟಿಲದು
ಬಚಿಟ್ಟ ಪ್ರೀತಿ
ಚೆಲ್ಲಲಾಗದ ಕೋಪ
ಅಳಿಸಲಾಗದ
ಆತಂಕ ಆಸೆ ಗಳು
ಬೊಟ್ಟಿಟ್ಟು ತೋರುವ
ಮುತ್ತಿಟ್ಟ ಕೈಗಳು
ಕನಸ ಸುಳಿ ಸುಳಿಯಾಗಿ
ವಿಶ್ರಾಂತಿ ಬೇಡವೇ ನಿನಗಿಷ್ಟು
ನಿನ್ನೊಳಗಿನ ಬಿಸಿಉಸಿರಿಗೆ
ನೀ ಸಾಕ್ಷಿ ಯಾಗಿ
ನಿನ್ನೊಳಗಿನ ಚೇತನಕೆ
ನೀ ಪ್ರೀತಿಯಾಗಿ
ಬದುಕಿನೀಕ್ಷಣಕೆ
ನೀ ಸಾಕ್ಷಿಯಾಗಿ
ನಿನ್ನೊಳಗಿನ
ಮಾತಿಗೆ ಮೌನ
ನೀನಾಗಿ
ವಿಶ್ರಾಂತಿ ಕೊಡಬಾರದೆ ನಿನಗಿಷ್ಟು
಼಼಼಼಼಼಼಼಼಼಼
ಶಾಂತಲಾ ಮಧು