ಕಾವ್ಯ ಸಂಗಾತಿ
ಪ್ರಮೋದ ನಾ ಜೋಶಿ
ಆರ್ತನಾದ
ಅಮ್ಮಾ ಎಂಥದೀ ದುರ್ದಶ ಬಾಳು
ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಯಿತೆ
ದೇಹದಿ ಎಲ್ಲ ಅಂಗಗಳಿದ್ದರೂ
ಆ ಅಂಗದಿಂದಲೇ ನಾವು ಸಾಯುತಿಹೆವು
ದೇವರೇಕೆ ಮಾಡಿದ ರಾಜಕೀಯ
ನಮ್ಮಯ ದೇಹದ ಮೇಲೆ
ದುಃಖದ ಸುಳಿಯ ಹೊಟ್ಟೆಯೊಳ ಇಟ್ಟು
ಕರಳುಗಳನೇ ಕಿತ್ತು ಬಿಟ್ಟಾ.
ಹೆಣ್ಣಾದ ನಮಗೆ ಭಾವನೆಯೂ ಇಲ್ಲವೇ
ಆಸೆ ಆಕಾಂಕ್ಷೆ ಸುಖವೆಲ್ಲಾ ಮರೀಚಿಕೆಯಾಗಿದೆ
ಗಂಡು ಗಢವಗಳ ಮರುಭೂಮಿಯಲ್ಲಿ
ಭರವಸೆಯ ಒಯಾಸಿಸ್ಸೂ ಚಿಮ್ಮುವುದಿಲ್ಲಾ
ಅಬಾಲ ವೃದ್ಧರಿಂದ ತದೇಕಚಿತ್ತ ನನ್ನತ್ತ
ಮೃಷ್ಟಾನ್ನ ಭೋಜನ ಕಂಡಂತೆ
ತಿಂದುಂಡು ಎಸೆವ ಎಲೆಯಂತಾಗಿಹೆವು
ತಿಪ್ಪೆಯೊಳ ಬದುಕು ನಮ್ಮ ಪಾಲಿಗೆ
ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಎಂದರೂ
ಬದುಕಿನ ತುಂಬಾ ಬೆತ್ತಲಾಗೆ ನೋಡಬಯಸುತಿಹರು
ಅರಿವೆ ನೀಡುವಾತನೂ ಇಲ್ಲಿ ತುಟ್ಟಿ
ಬರಲಾರನು ಮತ್ತೊಮ್ಮೆ ಇಲ್ಲಿಗೆ ಆ ಕೃಷ್ಣ
ಮನುವಿನ ತರ್ಕ ಅದೆಷ್ಟು ನಿಜ
ಹೆಣ್ಣು ಸ್ವತಂತ್ರಳಲ್ಲ
ಸ್ವತಂತ್ರ ಇರದ ಇಂದಿನ ದಿನಕೆ
ಬದುಕಿನೊಳ ನೊವು ತಪ್ಪಿದ್ದಲ್ಲ
ಅದಕ್ಕೆಂದು ಮಾಡುತಿಹರೋ ಏನೊ
ಹೆಣ್ಣು ಭ್ರೂಣದ ಹತ್ಯೆಯನ್ನು
ತಾವು ಪಟ್ಟ ನೋವು ಯಾತನೆ
ಮುಂದೆ ಅದಕೆ ಬಾರದಿರಲಿ ಎಂದು.
ಪ್ರಮೋದ ನಾ ಜೋಶಿ