ತಿಂಗಳ ಕವಿ
ಲೀಲಾಕುಮಾರಿ ತೊಡಿಕಾನ
ಕವಿ ಪರಿಚಯ
ಮೂಲತಃ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ತೊಡಿಕಾನದವರಾದ ಲೀಲಾಕುಮಾರಿ ತೊಡಿಕಾನರವರು ಎಂ.ಎ ಬಿ.ಎಡ್ ಪದವಿಯನ್ನು ಪಡೆದಿದ್ದು ಕಳೆದ ಹದಿನೈದು ವರ್ಷದಿಂದ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕತೆ ಕವನ, ಲೇಖನಗಳನ್ನು ಬರೆಯುವ ಹವ್ಯಾಸವಿರುವ ಇವರು ಉತ್ತಮ ವಾಗ್ಮಿ ಕೂಡ.ಸುಳ್ಯದ ಎನ್ ಎಂ ಸಿ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿನಿಯಾಗಿರುವಾಗ ಎನ್ ಎಸ್ ಎಸ್ ಘಟಕದ ಕಾರ್ಯದರ್ಶಿಯಾಗಿದ್ದು, ಅಂತರ್ ಕಾಲೇಜು ಎನ್ ಎಸ್ ಎಸ್ ಶಿಬಿರಕ್ಕೆ ಕಾಲೇಜಿನಿಂದ ಆಯ್ಕೆಯಾಗಿದ್ದರು. ಪದವಿ ಕೊನೆಯ ವರ್ಷದಲ್ಲಿರುವಾಗಲೇ ‘ಕಾವ್ಯಸಿಂಚನ’ ಎಂಬ ಕವನ ಸಂಕಲನವನ್ನು ಬಿಡುಗಡೆಗೊಳಿಸಿದ್ದರು.
ಕವನ ಸ್ಪರ್ಧೆಯಲ್ಲಿ ಬಹುಮಾನಿತಗೊಂಡಿದ್ದಕ್ಕಾಗಿ ‘ಕುವೆಂಪು ಕಾವ್ಯ ಪುರಸ್ಕಾರ’ ‘ದಸರಾ ಕಾವ್ಯ ಪುರಸ್ಕಾರ’ ಪ್ರಶಸ್ತಿಯನ್ನು ಪಡೆದುಕೊಂಡಿರುತಾರೆ. ಅತ್ಯುತ್ತಮ ಸಂಘಟನೆಗಾಗಿ ‘ಕರುನಾಡ ಕಣ್ಮಣಿ’ ‘ಅತ್ಯುತ್ತಮ ಸಂಘಟನಾ ಶಿಕ್ಷಕಿ’ ಪ್ರಶಸ್ತಿಯೂ ದೊರಕಿದೆ. ಭಾವಗೀತೆಯನ್ನೂ ಬರೆಯುವ ಇವರ ಕೆಲವು ಭಾವಗೀತೆಗಳು ಯುಟ್ಯೂಬ್ ನಲ್ಲಿ ಲಭ್ಯ ಇವೆ. ‘ಪ್ರೇಮಯಾನ’ ಎಂಬ ಆಲ್ಬಂ ಹಾಡು ಯುಟ್ಯೂಬ್ ನಲ್ಲಿ ಬಿಡುಗಡೆಗೊಂಡ ದಿನವೇ ಆರು ಸಾವಿರ ಜನ ವೀಕ್ಷಿಸಿದ್ದು ಈ ಹಾಡಿನ ಹೆಗ್ಗಳಿಕೆಯಾಗಿದೆ. ‘ಕಾವ್ಯಸಿಂಚನ’ ಮತ್ತು ‘ಹನಿಹನಿ ಇಬ್ಬನಿ’ ಇವರ ಪ್ರಕಟಿತ ಪುಸ್ತಕಗಳು. ಜಿಲ್ಲಾ ಮಟ್ಟ ರಾಜ್ಯಮಟ್ಟದ ಪತ್ರಿಕೆಗಳಲ್ಲೂ ಇವರ ಬರಹಗಳು ಪ್ರಕಟಿತಗೊಂಡಿವೆ. ಹಲವಾರು ಕವಿಗೋಷ್ಟಿ ಹಾಗೂ ವಿಚಾರಗೋಷ್ಟಿಗಳಲ್ಲೂ ಭಾಗವಹಿಸಿದ್ದಾರೆ. ಪ್ರಸ್ತುತ ಕುಶಾಲನಗರದಲ್ಲಿ ನೆಲೆಸಿದ್ದಾರೆ.
ಲೀಲಾಕುಮಾರಿ ತೊಡಿಕಾನ -ಕವಿತೆಗಳು
ಸೀಮೋಲ್ಲಂಘನ
ಬೇಲಿಗಳೇ ಇಲ್ಲದ
ಬಯಲ ವಿಸ್ತಾರ ಬದುಕಲಿ
ಅದೆಂಥ ನಿರಾಳ ನಿರ್ಲಿಪ್ತತೆ
ಮಿಗ ಖಗಗಳಿಗೆ…
ಹಾರಬೇಕೆಂದೆನಿಸಿದಾಗ ರೆಕ್ಕೆಬಿಚ್ಚಿ
ಭೂಮಿಗೆ ಭಾರವಾಗದಂತೆ
ಪುರ್ರನೆ ಹಾರುವ ಪಕ್ಷಿಗಳಿಗೆ
ಯಾವ ಸೀಮೆ?
ಹೆಗಲ ಮೇಲೆ ಕೈ ಹಾಕಿ ತಬ್ಬಿ ಹಿಡಿದ
ಮರದ ರೆಂಬೆ ಕೊಂಬೆಗಳಲಿ
ಜಾತಿ ಧರ್ಮ ಗಡಿಯ
ಹಂಗಿಲ್ಲದ ಸಾಮರಸ್ಯ!
ಎಲ್ಲೆ ಇಲ್ಲದ ಬಯಲ ಸೀಮೆಗೆ
ಗೆರೆ ಎಳೆದಿವೆ ಮನಗಳು
ಹರಿದ ನೆತ್ತರಿಗೆ ಸುರಿದ ಕಂಬನಿಗೆ
ಗಡಿ ದಾಟಬೇಡ ಎನ್ನುವುದೆಂತು?
ಗಡಿಯಿಂದಾಚೆಗೂ ಈಚೆಗೂ
ಗುಂಡಿನ ಸದ್ದು ಮೊಳಗುವಾಗ..
ಗಡಿ ಎಂದರೇನು????
******
ನುಡಿನಮನ
ಹಗೆಯೊಳು ಬಿಗಿಗೊಂಡ ಜಗದ
ಹೊಗೆಯೋಡಿಸಿ,ಬಗೆಬಗೆಯಲಿ
ಮೊಗೆಮೊಗೆದು ನಗೆತುಂಬಿ
ಖುಷಿ ಬುಗ್ಗೆ ಚಿಮ್ಮಿಸಿ
ಬಿಸಿಲ ಬೇಗೆಗೆ ನೆರಳಾದ ಹೆಮ್ಮರ!
ಜಾತಿ- ಧರ್ಮದ ಎಲ್ಲೆಗಳ ಮೀರಿ
ಪರಿಧಿಯೊಳಗಿನ ಸಂಬಂಧಗಳ
ಶರಧಿಯಾಚೆಗೆ ಚಾಚಿ
ದ್ವೇಷ ರುಜಿನಕ್ಕೆ ಪ್ರೀತಿ ಔಷಧಿ ಹಚ್ಚಿ
ತಮ ತುಂಬಿದ ಹೃದಯಗಳ
ಬೆಳಗಿದ ನೇಸರ!
ಕರಿಚುಕ್ಕಿಯೂ ಬಳಿಸುಳಿಯದ
ಶ್ವೇತ ಪುಟದ ಬದುಕು
ಅರಿವಿನ ಭಾರಕ್ಕೆ ಮಾಗಿ ಬಾಗಿ
ಬೀಗುವವರಿಗೆ ಪಾಠವಾಗಿ
ಹಬ್ಬುವ ಬಳ್ಳಿಗಳಿಗೆ
ಆಸರೆಯ ಹಂದರ!
ಕಹಿಬೇವಿನ ರಸ ಕುಡಿದೂ
ಮನಸು ಕಹಿಯಾಗಿಸದ ಕಾಯಕಯೋಗಿ
ಪ್ರೀತಿ ಬುತ್ತಿಯ ಉಣಿಸಿದ ತ್ರಿವಿಧ ದಾಸೋಹಿ
ಅಕ್ಷರ ಮಾಲೆಗಳ ತೊಡಿತೊಡಿಸಿ
ಮಕ್ಕಳ ಸಿಂಗರಿಸಿದ ಕಲೆಗಾರ!
ಸದ್ದು ಮಾಡುವ ಚಿಲ್ಲರೆಗಳ ಮಧ್ಯದಲ್ಲಿ
ಬೆಲೆಬಾಳುವ ನೋಟಿನಂತಿದ್ದು
ಮಾನವೀಯತೆಯ ಉಸಿರಾಡಿ
ನೆಲೆಬೆಲೆ ಉಳಿಸಿ ಹೆಗ್ಗುರುತು ಮೂಡಿಸಿದ
ನಡೆದಾಡುವ ದೇವರು
ಬೆಳದಿಂಗಳ ನಗುವಲ್ಲಿ ಕಾಣ್ಬ ಬಾಂದಳದ ಚಂದಿರ!
ಹೃದಯಗಳ ಮೀಟುತ್ತಲೇ..
ಭೂಸೀಮೆಯ ದಾಟಿ
ಪರಲೋಕ ಸೇವೆಗೆಂಬಂತೆ
ಸದ್ದಿಲ್ಲದೆ ಎದ್ದು ತೆರಳಿ ಸುದ್ದಿಯಾದವರು
ಶಿವಕುಮಾರರು..ಸದ್ಗುಣಗಳ ಆಗರ
ನೆನಪೊಂದೇ ….ಅಮರ!
********
ಆತ್ಮಸಾಕ್ಷಿಗೆ ಯಾವ ಧರ್ಮ?
ಮಡಿಲು ತುಂಬಿದ
ಅನಾಥ ಮಗುವಿನ ಕಂಗಳಲ್ಲಿ
ರಾಶಿ ರಾಶಿ ಮುಗ್ಧತೆ..
ಹಾಲ್ಗಲ್ಲದ ನಗುವಲ್ಲಿ
ತಮ ಸೀಳೋ ಬೆಳದಿಂಗಳು
ಕಿರಿ ಗಾತ್ರದ ಹಿರಿ ಮನಸಿನ ವಿಶ್ವಮಾನವ!
ಜನನ ಪ್ರಮಾಣಪತ್ರವೂ ಸಿದ್ಧ
ಅವಳೇ ತಾಯಿ, ಗಂಡನೇ ತಂದೆ
ಅವರದೇ ಜಾತಿ-ಧರ್ಮ!
ಜತನವಾಗಿ ಎತ್ತಿಟ್ಟಿದ್ದಾಳೆ
ಸಂಬಂಧಗಳಿಗಿಂತ ದಾಖಲೆಗೆ
ಬೆಲೆ ಜಾಸ್ತಿ ಎಂಬ ಸತ್ಯಕ್ಕೆ ತಲೆಬಾಗಿ
ಆತ್ಮಸಾಕ್ಷಿಗೆ ಯಾವ ಧರ್ಮ?
ಕಂದನ ಜನ್ಮದಾತನದೊಂದು ಧರ್ಮ
ಹೆತ್ತವಳದೋ ಮತ್ತೊಂದು ಧರ್ಮ
ಪೊರೆದವಳದೋ ಮಗದೊಂದು ಧರ್ಮ!
ಪ್ರಪಂಚವರಿಯದ ಬೆತ್ತಲೆ ಕಂದನಿಗೆ
ಯಾವ ಧರ್ಮದ ಅಂಗಿ ತೊಡಿಸಲಿ?
ಪ್ರೇಮಕ್ಕೆ ಕಾಮಕ್ಕೆ ಇಲ್ಲದ ಧರ್ಮ
ಕವಚದಂತೆ ದೇಹಕ್ಕೆ ಅಂಟುವ ಕರ್ಮ
ಎದೆಹಾಲಿಗೆ ,ಕೈತುತ್ತಿಗೆ ಯಾವ ಧರ್ಮದ ಹೆಸರಿಡಲಿ?
ಇದೀಗ ಜಾತಿ-ಧರ್ಮದ
ಕಿರು ಪರಿಧಿಯಿಂದ ಹೊರ ಬಂದಿದ್ದಾಳೆ
ಸರ್ವಧರ್ಮವನು ಜೊತೆಯಾಗಿ ಬೆರೆಸಿ
ಸೋಸಿದ ಸತ್-ಸಾರವನು ಕುಡಿಸಿ
ಬಿಟ್ಟು ಬಿಡುವಳು
ಮನುಜ ಕುಲದೊಳಗೆ..
ಜಾತಿ ಧರ್ಮದ ಉಡುಪು ತೊಡಿಸದೆ ಬೆತ್ತಲಾಗಿಸಿ
ಮಾನವ ಧರ್ಮದೆಡೆಗೆ ದಾರಿ ತೋರಿಸಿ!!
*******
ಲೀಲಾಕುಮಾರಿ ತೊಡಿಕಾನ