ಕಾವ್ಯ ಸಂಗಾತಿ
‘ಬೈಗು ಬೆಳಗಿಗೆ ಸಂಧಿಕಾಲವಿಲ್ಲ’
ಸ್ಮಿತಾ ರಾಘವೇಂದ್ರ
ಚೆಂದಗೆ ನಿರ್ಲಕ್ಷಿಸುವುದ ನೀ ಸಿದ್ದಿಸಿಕೊಂಡಾಗಲೇ
ನಾ ನನ್ನ ಬಲಹೀನತೆಗಳನ್ನು
ಬದಲಿಸಿಕೊಂಡಿದ್ದು
ನಿನ್ನ ವಿನಾಕಾರಣ ಪ್ರೀತಿಸುವದು
ಸುಮ್ಮ ಸುಮ್ಮನೆ
ನಿನ್ನ ಮಾತಿಗಾಗಿ ಇದುರು ನೋಡುವುದು
ನಿನ್ನನ್ನಷ್ಟೇ ಪ್ರೀತಿಸುವ ಹಠಕ್ಕೆ ಬೀಳುವುದು
ಇವೆಲ್ಲ ನನ್ನ ಬಲಹೀನತೆಗಳು ಅಂದುಕೊಂಡೆಯಾ!
ಪ್ರೇಮವೊಂದು
ಪರಮ ಪವಿತ್ರದ ನಿಯಮ
ಅಂದುಕೊಂಡಾಗೆಲ್ಲ
ತಣ್ಣಗೆ ನಿಯಮ ಮುರಿಯುತ್ತೀ
ಮುರಿದ ನಿಯಮವನ್ನೇ ನಾನು
ಮಮತೆಯಿಂದ ಎತ್ತಿ
ಎದೆಗೊತ್ತುಕೊಳ್ಳುತ್ತೇನೆ
ಅದನ್ನೇ ನೀನು ನನ್ನ ಬಲಹೀನತೆ ಎನ್ನುತ್ತಿ
ಆಗಲೇ ನಾನು ಸಣ್ಣಗೆ ಬದಲಾಗುತ್ತೇನೆ.
ಬಲಕಳೆದುಕೊಂಡ ಭಾವಕ್ಕೆ
ನಿಯಮ ಮುರಿದ ಪ್ರೇಮಕ್ಕೆ
ತವಿಸು ನಿನ್ನದು
ಜಾತ್ರೆ ಮುಗಿದ ಬೀದಿಯಲಿ ನಿಂತು
ಅಳುವ ಪುಟ್ಟ ಮಗುವೊಂದರ ನೆನಪಲಿ
ಒಲವ ಕಿರುಬೆಳ ಹಿಡಿದು ಸವರುತ್ತೇನೆ
ಆಗಲೇ ನೀ ನಿಯಮ ಮುರಿಯುವ
ಕಾಯಕದಲ್ಲಿ ಮತ್ತೆ ಭಾಗಿ
ಬದಲಾಗದ ನೀನೂ
ಮತ್ತೆ ಮತ್ತೆ ಬದಲಾಗುವ ನಾನೂ
ಬೈಗು ಬೆಳಗಿಗೆ ಸಂಧಿಕಾಲವಿಲ್ಲ
ಸ್ಮಿತಾ ರಾಘವೇಂದ್ರ
ವಾಹ್ ವಾಹ್…. ಸರಳ, ಅಷ್ಟೇ ಸಹಜವೂ ಸಹ !!!!! ಅಭಿನಂದನೆಗಳು
ಧನ್ಯವಾದ ಸರ್
ಅಭಿನಂದನೆಗಳು ಸ್ಮಿತಾ
ಅದ್ಭುತ ಕವಿತೆ.. ಅಭಿನಂದನೆಗಳು ಮೇಡಂ
ಬಹಳ ಚೆಂದದ ಕವಿತೆ ಸ್ಮಿತಾ